
ಬೆಂಗಳೂರು: ಈ ಬಾರಿಯ ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಗೆ ಆಹ್ವಾನವನ್ನು ಆರಂಭದಿಂದಲೂ ವಿರೋಧಿಸಿಕೊಂಡು ಬಂದಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಇದೀಗ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಬಾನು ಮುಷ್ತಾಕ್ ಆಹ್ವಾನ ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ರಾಜ್ಯ ಸರ್ಕಾರದ ಕ್ರಮಕ್ಕೆ ತಡೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ದಸರಾ ಉದ್ಘಾಟನೆ ವೇಳೆ ಚಾಮುಂಡೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಬೇಕು. ವೇದ ಮಂತ್ರ, ಧಾರ್ಮಿಕ ಆಚರಣೆಗಳೊಂದಿಗೆ ಉದ್ಘಾಟನೆಯ ಸಂಪ್ರದಾಯವಿದೆ. ಬಾನು ಮುಷ್ತಾಕ್ ಹಿಂದೂ ವಿರೋಧಿ, ಕನ್ನಡ ವಿರೋಧಿ ಭಾವನೆ ಹೊಂದಿದ್ದಾರೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ಬಾನು ಮುಷ್ತಾಕ್ ಅವರ ಆಯ್ಕೆ ಮಾಡಿದೆ ಎಂದು ಟೀಕಿಸಿದ್ದಾರೆ.
ಮೈಸೂರಿನ ರಾಜಮನೆತನದವರೂ ಸರ್ಕಾರದ ನಡೆ ವಿರೋಧಿಸಿದ್ದಾರೆ. ಆದರೂ ಸರ್ಕಾರದ ನಿರ್ಧಾರದಿಂದ ಹಿಂದೂಗಳ ಭಾವನೆಗೆ ಘಾಸಿ ಉಂಟು ಮಾಡಿದ್ದಾರೆ. ಹೀಗಾಗಿ ಬಾನು ಮುಷ್ತಾಕ್ ಅವರಿಗೆ ನೀಡಿದ ಆಹ್ವಾನ ಹಿಂಪಡೆಯುವಂತೆ ನಿರ್ದೇಶಿಸುವಂತೆ ಮನವಿ ಮಾಡಿದ್ದಾರೆ. ಹೈಕೋರ್ಟ್ ನಲ್ಲಿ ಈ ಅರ್ಜಿ ವಿಚಾರಣೆಗೆ ಬರಬೇಕಿದೆ.
'ಕೋರ್ಟ್ಗೆ ಹೋಗಲಿ, ಬಹಳ ಸಂತೋಷ'
ಮತ್ತೊಂದೆಡೆ ವಿಜಯಪುರದ ಆಲಮಟ್ಟಿಯಲ್ಲಿ ಮಾತಾಡಿದ ಸಿಎಂ ಸಿದ್ದರಾಮಯ್ಯ, ಪ್ರತಾಪ್ ಸಿಂಹ ಕೋರ್ಟ್ಗೆ ಹೋಗಿದ್ದು ಬಹಳ ಸಂತೋಷ, ಅದನ್ನು ಕೋರ್ಟ್ ತೀರ್ಮಾನ ಮಾಡುತ್ತೆ ಎಂದಿದ್ದಾರೆ. ಈ ಹಿಂದೆ ನಿಸಾರ್ ಅಹ್ಮದ್ ದಸರಾ ಉದ್ಘಾಟನೆ ಮಾಡಿದಾಗ ಅವ್ರು ಯಾಕೆ ಕೋರ್ಟ್ಗೆ ಹೋಗಲಿಲ್ಲ. ಟಿಪ್ಪು ಸುಲ್ತಾನ್ ಮಾಡಿದ್ರಲ್ಲ ಆಗ ಯಾಕೆ ಏನು ಮಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಪ್ರತಾಪ್ ಸಿಂಹ ಕೋರ್ಟ್ಗೆ ಹೋಗಲಿ, ನಾವು ಕೂಡ ಕಾನೂನು ಹೋರಾಟ ಮಾಡ್ತೇವೆ. ಅವ್ರು ಇದರಲ್ಲಿ ರಾಜಕೀಯ ಹೋರಾಟ ಮಾಡಿದ್ರೆ, ಎಲ್ಲದಕ್ಕೂ ನಾವು ಉತ್ತರ ನೀಡುತ್ತೇವೆ ಎಂದು ಹೇಳಿದರು.
Advertisement