
ಮೈಸೂರು: ಮುಸ್ಲಿಂ ಧರ್ಮದಲ್ಲಿ ಕುಂಕುಮ ಹಣೆಗಿಡುವ ಪದ್ಧತಿಯಿದೆಯೇ, ನಾಡಹಬ್ಬ ದಸರಾ ಉದ್ಘಾಟನೆಗೆ ಬರಲು ಕುಂಕುಮ ಹಣೆಗೆ ಹಾಕಿಕೊಂಡು ಬನ್ನಿ ಎಂದು ಬಾನು ಮುಷ್ತಾಕ್ ಅವರಿಗೆ ಹೇಳಲು ಆಗುತ್ತದೆಯೇ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಇಂದು ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಮುಂದೆ ಮಾತನಾಡಿದ ಅವರು, ಬಾನು ಮುಷ್ತಾಕ್ ಅವರು ಕನ್ನಡಾಂಬೆಯ ಕುಂಕುಮ ಬಗ್ಗೆ ಮಾತನಾಡಿದ್ದಾರೆಯೇ ಇಲ್ಲವೇ ಎಂದು ನನಗೆ ಗೊತ್ತಿಲ್ಲ, ಅದು ಬೇರೆ ವಿಷಯ. ಅವರು ಕನ್ನಡದ ಬರಹಗಾರ್ತಿ ಮತ್ತು ಸಾಹಿತಿ. ಕನ್ನಡದ ಬಗ್ಗೆ ಅವರಿಗೆ ಅಭಿಮಾನ, ಪ್ರೀತಿ, ಆಸಕ್ತಿ ಇಲ್ಲದಿದ್ದರೆ ಆ ಭಾಷೆಯಲ್ಲಿ ಬರೆಯಲು ಆಗುತ್ತದೆಯೆ ಎಂದು ಕೇಳಿದರು.
ಬಾನು ಅವರು ಅರಶಿನ, ಕುಂಕುಮ ಹಾಕಿಕೊಂಡು, ಹೂ ಮುಡಿದುಕೊಂಡು ದಸರಾ ಉದ್ಘಾಟಿಸಲು ಬಂದರೆ ನಾವು ಚಕಾರ ಎತ್ತುವುದಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ ಎಂದು ಪತ್ರಕರ್ತರು ಹೇಳಿದಾಗ, ಬಾನು ಮುಷ್ತಾಕ್ ಅವರು ಮುಸ್ಲಿಂ ಧರ್ಮದವರು, ಕುಂಕುಮ ಹಾಕುವುದು ಮುಸ್ಲಿಂ ಧರ್ಮದಲ್ಲಿದೆಯೇ, ಹಾಗಾದರೆ ನಾಡಹಬ್ಬ ದಸರಾದಲ್ಲಿ ಅನ್ಯಧರ್ಮದವರನ್ನು ಕರೆದರೆ ನೀವು ಕುಂಕುಮ, ಅರಶಿನ ಹಾಕಿಕೊಂಡು ಬನ್ನಿ ಎಂದು ಹೇಳಲು ಆಗುತ್ತದೆಯೇ ಎಂದು ಸಿಎಂ ಕೇಳಿದರು.
ಈ ವರ್ಷದ ಮೈಸೂರು ದಸರಾ ಉದ್ಘಾಟನೆಗೆ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸುವ ನಿರ್ಧಾರವನ್ನು ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸಮರ್ಥಿಸಿಕೊಂಡರು, ಈ ಹಬ್ಬವನ್ನು ಎಲ್ಲರೂ 'ನಾಡ ಹಬ್ಬ' (ರಾಜ್ಯೋತ್ಸವ) ಎಂದು ಆಚರಿಸುತ್ತಾರೆ ಎಂದು ಪುನರುಚ್ಚರಿಸಿದರು.
ಬಿಜೆಪಿಯವರು ಚಾಮುಂಡಿ ಚಲೋ ಮಾಡಲಿ
ಮೈಸೂರು ಮಹಾರಾಜರ ಕಾಲದಲ್ಲಿ ಮಿರ್ಜಾ ಇಸ್ಮಾಯಿಲ್ ಅವರನ್ನು ಅಂಬಾರಿ ಮೇಲೆ ಮೆರವಣಿಗೆ ಮಾಡಲಾಗಿತ್ತು. ಮಹಾರಾಜರು ಅಂಬಾರಿ ಮೇಲೆ ಕೂರಿಸಿಕೊಂಡು ಬರುತ್ತಿದ್ದರು. ಆಗ ಆರ್ ಎಸ್ ಎಸ್, ಬಿಜೆಪಿಯವರು ಎಲ್ಲಿ ಹೋಗಿದ್ದರು ಎಂದು ಕೂಡ ಸಿಎಂ ಪ್ರಶ್ನಿಸಿದರು.
2017ರಲ್ಲಿ ಮೈಸೂರು ದಸರಾವನ್ನು ನಿಸಾರ್ ಅಹಮ್ಮದ್ ಉದ್ಘಾಟಿಸಿದರು. ಆಗ ಬಿಜೆಪಿಯವರು ಆಕ್ಷೇಪ ಎತ್ತಲಿಲ್ಲ, ವಿರೋಧಿಸಲಿಲ್ಲ ಏಕೆ, ಬಿಜೆಪಿಯವರು ಚಾಮುಂಡಿ ಚಲೋ ಮಾಡಲಿ ಎಂದರು.
ರಾಜಕೀಯ ಪ್ರೇರಿತ ಯಾತ್ರೆ
ಬಿಜೆಪಿಯವರು ನಡೆಸಲು ಯೋಜಿಸುತ್ತಿರುವುದು ಧರ್ಮಸ್ಥಳ ಧರ್ಮಯಾತ್ರೆಯಲ್ಲ, ರಾಜಕೀಯ ಯಾತ್ರೆ. SIT ತನಿಖೆಯನ್ನು ಧರ್ಮಸ್ಥಳ ಹೆಗ್ಗಡೆಯವರೇ ಸ್ವಾಗತಿಸಿದ್ದಾರೆ. ನಮ್ಮ ಪೊಲೀಸ್ ನವರೇ ತನಿಖೆ ಮಾಡುತ್ತಿರುವಾಗ ಬಿಜೆಪಿಯವರಿಗೆ ಏಕೆ ನಂಬಿಕೆಯಿಲ್ಲ. ಆರಂಭದಲ್ಲಿ ಬಿಜೆಪಿಯವರು ತನಿಖೆ ಮಾಡಿ ಎಂದು ಹೇಳಲೇ ಇಲ್ಲ, ಆಮೇಲೆ ಶವ ಸಿಗದಿದ್ದಾಗ ತನಿಖೆಗೆ ಒತ್ತಾಯಿಸಿದರು. ನಮ್ಮ ಪೊಲೀಸರ ಮೇಲೆ ಬಿಜೆಪಿಯವರಿಗೆ ನಂಬಿಕೆ ಇಲ್ಲ ಎಂದರು.
ಬಿಜೆಪಿಗೆ ಫಂಡ್ ಬಂದಿದೆ
ಹೊರರಾಜ್ಯಗಳಿಂದ ಅನ್ಯಮೂಲಗಳಿಂದ ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿಯವರಿಗೇ ಹಣ ಬಂದಿದೆ. ಹೀಗಾಗಿ ಅವರು ಪ್ರತಿಭಟನೆ, ಹೋರಾಟ ಮಾಡುತ್ತಿದ್ದಾರೆ. ಇಲ್ಲದಿದ್ದರೆ ಇಷ್ಟು ವಿರೋಧ ಮಾಡುತ್ತಿರಲಿಲ್ಲ. ಎಲ್ಲ ವಿಚಾರದಲ್ಲೂ ರಾಜಕೀಯ ಮಾಡಬಾರದು, ಇದರಲ್ಲಿ ಸತ್ಯಾಂಶ ಇಲ್ಲ, ಸಿಬಿಐ ಇರುವುದು ಕೇಂದ್ರದ ಅಡಿಯಲ್ಲಿ, ಈಗ ಸುಪ್ರೀಂ ಕೋರ್ಟ್ ಗೆ ಹೋಗ್ತೀವಿ ಅಂತಾರೆ. ಹೋಗೋದು, ಬಿಡೋದು ಸೌಜನ್ಯಾ ತಾಯಿ ಅವರಿಗೆ ಬಿಟ್ಟದ್ದು. ಸಿಬಿಐಗೆ ವಹಿಸಬೇಕೆಂಬುದು ಕೂಡ ರಾಜಕೀಯ ಪ್ರೇರಿತ, ಎಸ್ ಐಟಿ ತನಿಖೆ ಮಾಡುತ್ತಿದೆ, ಸತ್ಯ ಹೊರಗೆ ಬರಲಿ ಎಂದರು.
ಧರ್ಮಸ್ಥಳಕ್ಕೆ ಚಿನ್ನಯ್ಯನ ಕರೆದುಕೊಂಡು ಬಂದಿದ್ದು ಕಾಂಗ್ರೆಸ್ ನವರು ಎಂಬ ಆರೋಪಕ್ಕೆ ವಿರೋಧ ಪಕ್ಷದಲ್ಲಿದ್ದ ಕೂಡಲೇ ಅವರು ಹೇಳಿದ್ದೆಲ್ಲ ಸತ್ಯವಾಗುವುದಿಲ್ಲ ಅವರು ಹೇಳಿದ್ದನ್ನೆಲ್ಲ ಕೇಳಬೇಕೆಂದಿಲ್ಲ ಎಂದರು.
Advertisement