
ಬೆಂಗಳೂರು: ಚಾಮುಂಡೇಶ್ವರಿ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆಯಾದರೆ ಧರ್ಮಸ್ಥಳ ಚಲೋ ಮಾದರಿಯಲ್ಲಿ ಚಾಮುಂಡೇಶ್ವರಿ ಚಲೋ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಬಿಜೆಪಿ ಎಚ್ಚರಿಸಿದೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಚಾಮುಂಡೇಶ್ವರಿ ದೇವಿ ಕಾಂಗ್ರೆಸ್ ಸರ್ಕಾರಕ್ಕೆ ಒಳ್ಳೆಯ ಬುದ್ಧಿ ನೀಡಲಿ. ಹಿಂದೂ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸುವ ಅವರ ಮನಸ್ಥಿತಿಯನ್ನು ದೇವರು ತೆಗೆದುಹಾಕಲಿ. ಹಿಂದೂ ಧಾರ್ಮಿಕ ಕೇಂದ್ರಗಳನ್ನು ಯಾವಾಗಲೂ ರಕ್ಷಿಸಬೇಕು ಮತ್ತು ಪವಿತ್ರವಾಗಿ ಉಳಿಯಬೇಕು. ಸರ್ಕಾರ ಹಿಂದೂಗಳ ಭಾವನೆಗಳಿಗೆ ಹಾನಿ ಮಾಡಬಾರದು. ಇದಕ್ಕಾಗಿ ನಾನು ತಾಯಿಯಲ್ಲಿ ಪ್ರಾರ್ಥಿಸಿದ್ದೇನೆಂದು ಹೇಳಿದರು.
ಮೈಸೂರು ರಾಜಮನೆತನವು ನೂರಾರು ವರ್ಷಗಳಿಂದ ದಸರಾ ಆಚರಿಸುತ್ತಿದೆ. ಕಾಂಗ್ರೆಸ್ ಸರ್ಕಾರ ಇಂತಹ ಪವಿತ್ರ ಹಬ್ಬವನ್ನು ಅಪವಿತ್ರಗೊಳಿಸಬಾರದು. ಚಾಮುಂಡೇಶ್ವರಿ ದೇವಾಲಯ ಹಿಂದೂ ದೇವಾಲಯವಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಹಾಗಿದ್ದಲ್ಲಿ, ದೇವಾಲಯ ಯಾರದ್ದು? ನಿಮಗೆ ಧೈರ್ಯವಿದ್ದರೆ, ನೀವು ಮಸೀದಿಯ ಮುಂದೆ ಹೋಗಿ ಅದು ಮುಸ್ಲಿಮರಿಗೆ ಸೇರಿಲ್ಲ ಎಂದು ಹೇಳುತ್ತೀರಾ? ಶಬರಿಮಲೆ ಮತ್ತು ತಿರುಪತಿಯ ನಂತರ, ಈಗ ಧರ್ಮಸ್ಥಳ ಮತ್ತು ಚಾಮುಂಡೇಶ್ವರಿ ದೇವಾಲಯಗಳನ್ನು ಗುರಿಯಾಗಿಸಲಾಗುತ್ತಿದೆ ಎಂದು ಕಿಡಿಕಾರಿದರು.
ಅಯೋಧ್ಯೆಯನ್ನು ಉಳಿಸಲು 500 ವರ್ಷಗಳ ಕಾಲ ಹೋರಾಡಿದೆವು. ಈ ಟೂಲ್‌ಕಿಟ್ ಸಂಸ್ಕೃತಿ ಹೀಗೆಯೇ ಮುಂದುವರಿದರೆ ಕಾಂಗ್ರೆಸ್‌ನ ಅವನತಿ ಇಲ್ಲಿಂದಲೇ ಪ್ರಾರಂಭವಾಗುತ್ತದೆ ಎಂದು ಎಚ್ಚರಿಸಿದರು.
Advertisement