
ವಿಜಯಪುರ: ಪಿಪಿಪಿ ಮಾದರಿಯಲ್ಲಿ ವಿಜಯಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಸರ್ಕಾರದ ಪ್ರಸ್ತಾವನೆಯನ್ನು ಹಲವಾರು ಸಂಘಟನೆಗಳು ತೀವ್ರವಾಗಿ ವಿರೋಧಿಸುತ್ತಿದ್ದು, ಈ ನಡುವೆ ತನ್ನ ನಡೆಯನ್ನು ರಾಜ್ಯ ಸರ್ಕಾರ ಶನಿವಾರ ಸಮರ್ಥಿಸಿಕೊಂಡಿದೆ.
ಕೃಷ್ಣಾ ನದಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು, ರಾಜ್ಯದಲ್ಲಿ ಪಿಪಿಪಿ ಮಾದರಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಕುರಿತು ರಾಜ್ಯ ಸರ್ಕಾರವು ಕೇಂದ್ರದಿಂದ ಮಾರ್ಗದರ್ಶನ ಪಡೆಯುತ್ತಿದೆ ಎಂದು ಹೇಳಿದರು.
ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಕುರಿತು ಕೇಂದ್ರ ಸರ್ಕಾರವು ನಮಗೆ ಮಾರ್ಗದರ್ಶನ ನೀಡುತ್ತಿದೆ, ನಾವು ಅದನ್ನು ಅನುಸರಿಸುತ್ತಿದ್ದೇವಷ್ಟೆ. ಅದರ ಆಧಾರದ ಮೇಲೆಯೇ ನಾವು ಟೆಂಡರ್‌ಗಳನ್ನು ಆಹ್ವಾನಿಸಿದ್ದೇವೆ. ಆದರೆ, ಇಲ್ಲಿಯವರೆಗೆ ಯಾರೂ ರಾಜ್ಯದಲ್ಲಿ ಆಸಕ್ತಿ ತೋರಿಸಿಲ್ಲ. ಯಾರಾದರೂ ಆಸಕ್ತಿ ತೋರಿದರೆ, ಅರ್ಜಿ ಸಲ್ಲಿಸಿದರೆ, ಸರ್ಕಾರ ಅದನ್ನು ಪರಿಗಣಿಸುತ್ತದೆ ಎಂದು ತಿಳಿಸಿದರು.
ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜುಗಳಿದ್ದರೂ, ವಿದ್ಯಾರ್ಥಿಗಳ ಹಿತಾಸಕ್ತಿಗೆ ಧಕ್ಕೆಯಾಗುವುದಿಲ್ಲ ಏಕೆಂದರೆ ವಿದ್ಯಾರ್ಥಿಗಳು ಸರ್ಕಾರಿ ಮಾನದಂಡಗಳ ಪ್ರಕಾರವೇ ಪ್ರವೇಶ ಪಡೆಯುತ್ತಾರೆ. ನಿಯಮಗಳು ಎಷ್ಟು ಕಠಿಣವಾಗಿವೆಯೆಂದರೆ, ಕಾಲೇಜಿನ ಆಡಳಿತ ಮಂಡಳಿಯೂ ಸಹ ತಮ್ಮ ಆಯ್ಕೆಯ ಯಾವುದೇ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟುಗಳನ್ನು ನೀಡಲು ಸಾಧ್ಯವಿಲ್ಲ ಏಕೆಂದರೆ ಅವರು ಪ್ರವೇಶ ಪಡೆಯುವ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಏತನ್ಮಧ್ಯೆ ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ನಿಲುವನ್ನು ಡಿಕೆ.ಶಿವಕುಮಾರ್ ಅವರು ಸರ್ಥಿಸಿಕೊಂಡಿದ್ದರೂ, ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಅವರು ನೀಡಿದ್ದ ಹೇಳಿಕೆ ಬೇರೆಯೇ ಆಗಿತ್ತು.
ಸರ್ಕಾರವು ಪ್ರತಿ ಜಿಲ್ಲೆಯಲ್ಲಿಯೂ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ನಿರ್ಧರಿಸಿದೆ, ಆದರೆ ಎಲ್ಲಾ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಸಾಧ್ಯವಿಲ್ಲದ ಕಾರಣ, ಹಂತ ಹಂತವಾಗಿ ನಿರ್ಮಾಣ ಮಾಡುತ್ತದೆ ಎಂದು ಸಿಎಂ ಹೇಳಿದರು.
"ಬಾಗಲಕೋಟೆಗೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿದಂತೆ, ಇತರ ಜಿಲ್ಲೆಗಳಲ್ಲಿಯೂ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಸ್ಥಾಪನೆಯಾಗಲಿದೆ ಎಂದು ತಿಳಿಸಿದರು. ಆದರೆ, ಪಿಪಿಪಿ ಮಾದರಿ ವೈದ್ಯಕೀಯ ಕಾಲೇಜು ಸ್ಥಾಪನೆ ಎಂದು ಮುಖ್ಯಮಂತ್ರಿಗಳು ಉಲ್ಲೇಖಿಸಿಲಿಲ್ಲ.
ನಂತರ ಮುಖ್ಯಮಂತ್ರಿಯಿಂದ ಮೈಕ್ ತೆಗೆದುಕೊಂಡ ಶಿವಕುಮಾರ್ ಅವರು, ಪಿಪಿಪಿ ಮಾದರಿ ವೈದ್ಯಕೀಯ ಕಾಲೇಜು ಸ್ಥಾಪನೆ ಯೋಜನೆಯನ್ನು ಸಮರ್ಥಿಸಿಕೊಂಡರು.
ಇದಕ್ಕೂ ಮೊದಲು, ವಿಜಯಪುರದಲ್ಲಿ ಪಿಪಿಪಿ ವೈದ್ಯಕೀಯ ಕಾಲೇಜನ್ನು ವಿರೋಧಿಸಲು ರಚಿಸಲಾದ ವೇದಿಕೆಯು ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ, ಪ್ರಸ್ತಾವನೆಯನ್ನು ಕೈಬಿಡುವಂತೆ ಒತ್ತಾಯಿಸಿತು.
Advertisement