
ವಿಜಯಪುರ: ಮೈಸೂರು ದಸರಾ ಉದ್ಘಾಟಿಸಲು ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸುವ ತಮ್ಮ ಸರ್ಕಾರದ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದು, ವಿರೋಧಗಳು ರಾಜಕೀಯ ಪ್ರೇರಿತ ಎಂದು ಶನಿವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾನು ಮುಷ್ತಾಕ್ ಅವರು ಕನ್ನಡದ ವಿರುದ್ಧ ಮಾತನಾಡಿದ್ದಾರೆಂಬ ಆರೋಪಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಅವರು ಕನ್ನಡದಲ್ಲಿ ಬರೆದ ಕೃತಿಯ ಅನುವಾದಕ್ಕೆ ಬುಕರ್ ಪ್ರಶಸ್ತಿ ಬಂದಿದೆ. ಹೀಗಾಗಿ ಸರ್ಕಾರ ಬಾನು ಮುಷ್ತಾಕ್ ಹಾಗೂ ಆ ಕೃತಿಯನ್ನು ಅನುವಾದಿಸಿದ ದೀಪಾ ಭಸ್ತಿಯವರಿಗೆ ಸನ್ಮಾನಿಸಿದೆ. ಬಾನು ಮುಷ್ತಾಕ್ ಕನ್ನಡ ಸಾಹಿತಿ ಆಗಿರುವುದರಿಂದ ದಸರಾ ಉದ್ಘಾಟಿಸಲಿದ್ದಾರೆಂದು ಹೇಳಿದರು.
ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ಅವರು, ಈ ಹಿಂದೆ ಕವಿ ನಿಸಾರ್ ಅಹ್ಮದ್ ಅವರು ದಸರಾ ಉದ್ಘಾಟನೆಗೆ ಬಂದಾಗ ಏಕೆ ವಿರೋಧಿಸಲಿಲ್ಲ? ಆಗೇಕೆ ಮೌನ ತಾಳಿದ್ದರು? ರಾಜಕೀಯ ದುರುದ್ದೇಶದಿಂದ ಬಿಜೆಪಿಯವರು ಬಾನು ಮುಷ್ತಾಕ್ ನಾಡಹಬ್ಬ ಉದ್ಘಾಟಿಸುವುದನ್ನು ವಿರೋಧಿಸುತ್ತಿದ್ದಾರೆಂದು ತಿಳಿಸಿದರು.
ಬಳಿಕ ಪ್ರತಾಪ್ ಸಿಂಹ ಅವರು ಬಾನು ಮುಷ್ತಾಕ್ ಅವರು ದಸರಾ ಉದ್ಘಾಟಿಸುವ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಕವಿ ನಿಸಾರ್ ಅಹಮ್ಮದ್ ದಸರಾ ಉದ್ಘಾಟನೆಗೆ ಬಂದಾಗ ಏಕೆ ಕೋರ್ಟ್‌ಗೆ ಹೋಗಲಿಲ್ಲ? ಹೈದರಾಲಿ ಟಿಪ್ಪು, ಮಿರ್ಜಾ ಇಸ್ಮಾಯಿಲ್ ಮೆರವಣಿಗೆ ಮಾಡಿದಾಗ ಏಕೆ ವಿರೋಧ ಮಾಡಲಿಲ್ಲ?’ ಎಂದು ಪ್ರಶ್ನಿಸಿದರು. ಅಲ್ಲದೆ, ‘ಅವರಿಗೆ ರಾಜಕೀಯವಾಗಿ ಉತ್ತರ ನೀಡುವ ಜೊತೆಗೆ ನ್ಯಾಯಾಲಯದಲ್ಲೂ ಉತ್ತರ ನೀಡುತ್ತೇವೆ ಎಂದು ತಿಳಿಸಿದರು.
Advertisement