
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎಂದು ಆರೋಪಿಸಲಾಗಿರುವ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) 2012 ರಲ್ಲಿ ಅತ್ಯಾಚಾರ ಮತ್ತು ಕೊಲೆಯಾದ ಸೌಜನ್ಯಾಳ ಮಾವನನ್ನು ಬಂಗ್ಲೆಗುಡ್ಡಕ್ಕೆ ಕರೆದೊಯ್ದು, ಸ್ಥಳದಲ್ಲಿ ಮಹಜರು ನಡೆಸಿದೆ.
ಎಸ್‌ಐಟಿ ಅಧಿಕಾರಿಗಳು ಶನಿವಾರ ಸಂಜೆ 7.30 ರ ಸುಮಾರಿಗೆ ಸೌಜನ್ಯಾಳ ಮಾವ ವಿಠಲಗೌಡ ಅವರನ್ನು ಸ್ಥಳಕ್ಕೆ ಕರೆದೊಯ್ದು ಪರಿಶೀಲನೆ ನಡೆಸಿದೆ ಎಂದು ತಿಳಿದುಬಂದಿದೆ.
ವಿಠಲ ಗೌಡ ಮತ್ತು ಜಯಂತ್ ಅವರು ಬುರುಡೆಯನ್ನು ಈ ಜಾಗದಿಂದ ತೆಗೆದು ಚಿನ್ನಯ್ಯನಿಗೆ ನೀಡಿದ ಹಿನ್ನೆಲೆಯಲ್ಲಿ ಸಂಜೆ ಸ್ಥಳ ಮಹಜರು ಮಾಡಿದ್ದಾರೆ ಎನ್ನಲಾಗುತ್ತಿದೆ.
ಜಯಂತ್ ಟಿ, ಗಿರೀಶ್ ಮಟ್ಟಣ್ಣವರ್ ಜೊತೆ ವಿಠಲ ಗೌಡ ನಿಕಟ ಸಂಪರ್ಕದಲ್ಲಿದ್ದ ಕಾರಣ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್ ನೀಡಿತ್ತು. ಹೀಗಾಗಿ ಶುಕ್ರವಾರ ವಿಠಲ್ ಗೌಡ ಎಸ್‌ಐಟಿ ಕಚೇರಿಗೆ ಹಾಜರಾಗಿದ್ದರು.
ಏತನ್ಮಧ್ಯೆ ಧರ್ಮಸ್ಥಳ ಬುರುಡೆ ಪ್ರಕರಣದ ಆರೋಪಿಯಾಗಿರುವ ಚಿನ್ನಯ್ಯನಿಗೆ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಶನಿವಾರ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡದ ಪೊಲೀಸರು ಚಿನ್ನಯ್ಯನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಕೋರ್ಟ್ ಚಿನ್ನಯ್ಯನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತು.
ಕೋರ್ಟ್ ಆದೇಶದ ಅನ್ವಯ 15 ದಿನಗಳ ಎಸ್‌ಐಟಿ ಕಸ್ಟಡಿಯಲ್ಲಿದ್ದ ಚಿನ್ನಯ್ಯನನ್ನು ಶಿವಮೊಗ್ಗ ಜೈಲಿಗೆ ಕಳುಹಿಸಲು ಪೊಲೀಸರು ಈಗ ಸಿದ್ಧತೆ ನಡೆಸುತ್ತಿದ್ದಾರೆ.
ಭದ್ರತಾ ದೃಷ್ಟಿಯಿಂದ ಆರೋಪಿ ಚಿನ್ನಯ್ಯನನ್ನು ಪೊಲೀಸರು ಮಂಗಳೂರಿನ ಬದಲು ಶಿವಮೊಗ್ಗ ಜೈಲಿಗೆ ಕಳುಹಿಸಲು ಮುಂದಾಗಿದ್ದಾರೆಂದು ಮೂಲಗಳು ತಿಳಿಸಿವೆ.
ಈ ನಡುವೆ ಶವಗಳ ಹೊರ ತೆಗೆಯುವ ಸಮಯದಲ್ಲಿ ಪತ್ತೆಯಾದ ಮಾನವ ಅಸ್ಥಿಪಂಜರಗಳು ಮತ್ತು ದೂರುದಾರರು ಸಾಕ್ಷಿಯಾಗಿ ನೀಡಿದ ತಲೆಬುರುಡೆಯ ಬಗ್ಗೆ ಎಫ್‌ಎಸ್‌ಎಲ್ ವರದಿಗಳು ಇನ್ನೂ ಬಂದಿಲ್ಲ ಎಂದು ಎಸ್‌ಐಟಿಗೆ ಸಂಬಂಧಿಸಿದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
Advertisement