
ಬೆಂಗಳೂರು: ಬಿಜೆಪಿಯವರು ಅನವಶ್ಯಕವಾಗಿ ಪ್ರಚೋದನೆ ಮಾಡುವುದರಲ್ಲಿ ನಿಸ್ಸೀಮರು. ಸಮಾಜದ ಸ್ವಾಸ್ಥ್ಯ, ನೆಮ್ಮದಿ ಕೆಡಿಸುವುದರಲ್ಲಿ ನಿಸ್ಸೀಮರು. ಅನಗತ್ಯವಾಗಿ ಗುಂಪು ಸೇರಿ ಗಲಾಟೆ ಮಾಡಿಸುವವರು, ಮಾಡುವವರ ಮೇಲೆ ಕಠಿಣವಾದ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಮದ್ದೂರು ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಮದ್ದೂರಿಗೆ ಹೋಗುತ್ತಿದ್ದಾರೆ. ಅಲ್ಲಿನ ಪರಿಸ್ಥಿತಿ ಅವಲೋಕನ ಮಾಡಿ ಅವರು ನೀಡುವ ವರದಿ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಮೆರವಣಿಗೆ ಸಂದರ್ಭದಲ್ಲಿ ಬಾವುಟ ತೆರವು ಮಾಡುವ ವೇಳೆ ಗಲಾಟೆ ನಡೆದಿದೆ ಎಂಬ ಮಾಹಿತಿಯಿದೆ. ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೆ ಹಿಂಸಾಚಾರ ನಡೆಯುತ್ತಿರಲಿಲ್ಲವಲ್ಲಾ ಎಂದು ಕೇಳಿದ್ದಕ್ಕೆ ಸಿಎಂ, ಅಲ್ಲಿ ಏನು ನಡೆದಿದೆ ಎಂದು ವರದಿ ಸಂಪೂರ್ಣ ಬಂದ ಮೇಲೆ ತೀರ್ಮಾನ ಮಾಡುತ್ತೇವೆ ಎಂದರು.
ಮದ್ದೂರಿನಲ್ಲಿ ಮಸೀದಿ ಮುಂದೆ ಗಣೇಶ ಮೆರವಣಿಗೆ ಹೋಗುವಾಗ ಗಲಾಟೆ ನಡೆದಿದೆ. ಗಲಭೆ ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಲಾಗಿದೆ. 21 ಮಂದಿಯ ಬಂಧನವಾಗಿದೆ. ಯಾರು ತಪ್ಪು ಮಾಡಿದರೂ ಕೂಡ ಅದು ಹಿಂದೂಗಳೇ ಆಗಲಿ, ಮುಸಲ್ಮಾನರೇ ಆಗಲಿ ಅಥವಾ ಯಾವ ಪಕ್ಷದ ಕಾರ್ಯಕರ್ತರೇ ಆಗಿರಲಿ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಇಂಥಹ ಘಟನೆ ಈ ವರ್ಷ ಎಲ್ಲಿಯೂ ನಡೆದಿಲ್ಲ ಎಂದರು.
ಸಮಾಜದಲ್ಲಿ ನೆಮ್ಮದಿ ಕೆಡಿಸುವವರೇ ಬಿಜೆಪಿ-ಜೆಡಿಎಸ್ ನವರು. ಅನವಶ್ಯಕವಾಗಿ ಪ್ರಚೋದನಾಕಾರಿ ಹೇಳಿಕೆ ನೀಡುವುದು ಸರಿಯಲ್ಲ. ಪೊಲೀಸ್ ನವರು ಈ ಪ್ರಕರಣದಲ್ಲಿ ಕಾನೂನು ರೀತಿ ಕ್ರಮ ಕೈಗೊಂಡಿದ್ದಾರೆ ಎಂದರು.
Advertisement