ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಘರ್ಷಣೆ: ಮದ್ದೂರಿನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ: ಜಿ ಪರಮೇಶ್ವರ

ಮದ್ದೂರು ಪಟ್ಟಣದಲ್ಲಿ ಉದ್ವಿಗ್ನತೆ ಉಂಟಾಗಿದ್ದರಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.
Karnataka Home Minister G Parameshwara
ಜಿ ಪರಮೇಶ್ವರ
Updated on

ಮಂಡ್ಯ: ಮದ್ದೂರಿನಲ್ಲಿ ಗಣಪತಿ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಭಾನುವಾರ ರಾತ್ರಿ ಭುಗಿಲೆದ್ದ ಕೋಮು ಘರ್ಷಣೆಯ ನಂತರ ಸದ್ಯ ಮದ್ದೂರು ಪಟ್ಟಣದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ಸೋಮವಾರ ಹೇಳಿದ್ದಾರೆ.

ಪಟ್ಟಣದಲ್ಲಿ ಉದ್ವಿಗ್ನತೆ ಉಂಟಾಗಿದ್ದರಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಭಾನುವಾರ ರಾಮ್ ರಹೀಮ್ ನಗರದಲ್ಲಿ ಗಣೇಶ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆದಾಗ ಘರ್ಷಣೆ ಭುಗಿಲೆದ್ದಿತು.

ಪೊಲೀಸರ ಪ್ರಕಾರ, ಮಸೀದಿಯಿಂದ ಸುಮಾರು 500 ಮೀಟರ್ ದೂರದಲ್ಲಿ ಕಲ್ಲು ತೂರಾಟ ಪ್ರಾರಂಭವಾಯಿತು. ಆಗ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರು ಕೂಡ ಕಲ್ಲು ತೂರಾಟ ನಡೆಸಿದರು.

ಘರ್ಷಣೆಯಲ್ಲಿ ತೊಡಗಿದ್ದ ಎರಡು ಗುಂಪುಗಳನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ನಂತರ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕೇಸರಿ ಧ್ವಜಗಳನ್ನು ಹಿಡಿದು 'ಜೈ ಶ್ರೀ ರಾಮ್' ಘೋಷಣೆಗಳನ್ನು ಕೂಗಿದರು ಮತ್ತು ಟೈರ್‌ಗಳನ್ನು ಸುಟ್ಟರು.

ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಈ ಸಂಬಂಧ ಎರಡು ಎಫ್‌ಐಆರ್‌ಗಳು ದಾಖಲಾಗಿದ್ದು, ಒಂದನ್ನು ಸ್ವತಃ ದಾಖಲಿಸಲಾಗಿದ್ದು, ಇನ್ನೊಂದು ಗಾಯಗೊಂಡ ವ್ಯಕ್ತಿಯ ದೂರಿನ ಆಧಾರದ ಮೇಲೆ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ 21 ಜನರನ್ನು ವಶಕ್ಕೆ ಪಡೆಯಲಾಗಿದ್ದು, ಮತ್ತಷ್ಟು ಜನರನ್ನು ಬಂಧಿಸಲಾಗುತ್ತದೆ ಎಂದು ಹೇಳಿದರು.

'ಗಾಯಾಳುಗಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಒಬ್ಬ ವ್ಯಕ್ತಿಗೆ ನಾಲ್ಕು ಹೊಲಿಗೆಗಳನ್ನು ಹಾಕಲಾಗಿದ್ದು, ಉಳಿದವರೆಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಡೆಯಲು ಈ ಪ್ರದೇಶದಲ್ಲಿ ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿದೆ' ಎಂದು ಎಸ್ಪಿ ಹೇಳಿದರು.

Karnataka Home Minister G Parameshwara
ಮದ್ದೂರಿನಲ್ಲಿ ಪ್ರತಿಭಟನೆ ವೇಳೆ ಪೊಲೀಸರಿಂದ ಲಾಠಿಚಾರ್ಜ್; 21 ಮಂದಿ ಬಂಧನ; Video

ಹುಬ್ಬಳ್ಳಿಯಲ್ಲಿಯೂ ಕಲ್ಲುತೂರಾಟ

ಶನಿವಾರ ರಾತ್ರಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯ ವೇಳೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ನಂತರ ಹುಬ್ಬಳ್ಳಿಯಲ್ಲಿಯೂ ಉದ್ವಿಗ್ನತೆ ಉಂಟಾಗಿದ್ದು, ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಪರಿಸ್ಥಿತಿ ಉದ್ವಿಗ್ನಗೊಳ್ಳದಂತೆ ತಡೆಯಲು ಪೊಲೀಸರು ಮಧ್ಯಪ್ರವೇಶಿಸಿದ್ದು, ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ.

ಮದ್ದೂರಿನಾದ್ಯಂತ ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದ್ದು, ಹಿರಿಯ ಅಧಿಕಾರಿಗಳು ಶಾಂತಿ ಕಾಪಾಡಲು ಪ್ರದೇಶದಲ್ಲಿ ಮೊಕ್ಕಾಂ ಹೂಡಿದ್ದಾರೆ. ಮದ್ದೂರು, ಹುಬ್ಬಳ್ಳಿ ಮತ್ತು ಶಿವಮೊಗ್ಗದಿಂದ ವರದಿಯಾದ ಘಟನೆಗಳ ಹಿನ್ನೆಲೆಯಲ್ಲಿ ಜಿಲ್ಲೆಗಳಾದ್ಯಂತ ಪೊಲೀಸರನ್ನು ಕಟ್ಟೆಚ್ಚರದಲ್ಲಿರಿಸಲಾಗಿದೆ.

ಮದ್ದೂರು ಘಟನೆಯ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪರಮೇಶ್ವರ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

'ಮದ್ದೂರಿನ ಪರಿಸ್ಥಿತಿಗೆ ಸಂಬಂಧಿಸಿದಂತೆ, ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ. ಈಗ ಯಾವುದೇ ಸಮಸ್ಯೆ ಇಲ್ಲ. ಬಳಿಕ ಗಣೇಶನ ವಿಸರ್ಜನೆ ನಡೆದಿದೆ. ಸಣ್ಣಪುಟ್ಟ ಘಟನೆಗಳು ನಡೆದಿವೆ. ಒಂದು ಸ್ಥಳದಲ್ಲಿ, ಧ್ವಜ ತಂದಿದ್ದಕ್ಕಾಗಿ ಇರಿಯುವ ಪ್ರಯತ್ನ ನಡೆದಿದೆ. ಇನ್ನೊಂದು ಸ್ಥಳದಲ್ಲಿ, ಗಣಪತಿ ಮೆರವಣಿಗೆಯ ಸಮಯದಲ್ಲಿ ಮೂರ್ತಿಯ ಮೇಲೆ ಇಬ್ಬರು ಬಾಲಕರು ಉಗುಳಿದ್ದಾರೆ. ಈ ರೀತಿಯ ಘಟನೆಗಳು ನಡೆದಿವೆ. ಸದ್ಯ ಎಲ್ಲವೂ ನಿಯಂತ್ರಣದಲ್ಲಿದೆ' ಎಂದು ಅವರು ಹೇಳಿದರು.

'ಶಾಂತಿ ಕಾಪಾಡಲು ಎರಡೂ ಸಮುದಾಯಗಳ ಜನರು ಸಹಕರಿಸಬೇಕು ಮತ್ತು ಪೊಲೀಸರು ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ರಾಜ್ಯದಾದ್ಯಂತ ಲಕ್ಷಗಟ್ಟಲೆ ಗಣಪತಿ ಮೂರ್ತಿಗಳನ್ನು ವಿಸರ್ಜಿಸಲಾಯಿತು. ಎಲ್ಲಿಯೂ ಅಂತಹ ಗಲಾಟೆ ನಡೆದಿಲ್ಲ. ಎಲ್ಲವೂ ಶಾಂತಿಯುತವಾಗಿ ನಡೆಯಿತು ಎಂದು ನಾವು ಭಾವಿಸುತ್ತಿದ್ದಾಗ, ಮದ್ದೂರು ಘಟನೆ ಸಂಭವಿಸಿದೆ. ನಾವು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಹಿಂಸಾಚಾರವು ತುಷ್ಟೀಕರಣ ರಾಜಕೀಯದ ಪರಿಣಾಮವಾಗಿದೆ ಎಂಬ ಬಿಜೆಪಿಯ ಆರೋಪದ ಬಗ್ಗೆ ಮಾತನಾಡಿದ ಪರಮೇಶ್ವರ, 'ಅವರು ಹಾಗೆ ಹೇಳುತ್ತಲೇ ಇರುತ್ತಾರೆ. ಸೂಕ್ಷ್ಮ ಜಿಲ್ಲೆಗಳಲ್ಲಿ ಪೊಲೀಸ್ ಇಲಾಖೆ ಈಗಾಗಲೇ ಹೆಚ್ಚಿನ ಪಡೆಗಳನ್ನು ನಿಯೋಜಿಸುವ ಮೂಲಕ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ. ನಾವು ಆ ಜಿಲ್ಲೆಗಳಿಗೆ ಹಿರಿಯ ಅಧಿಕಾರಿಗಳನ್ನು ಕಳುಹಿಸಿದ್ದೇವೆ. ನಾವು ನಿಷೇಧಾಜ್ಞೆಗಳನ್ನು ಜಾರಿಗೊಳಿಸಿದ್ದೇವೆ. ಪರಿಸ್ಥಿತಿ ಕೈಮೀರಲು ನಾವು ಬಿಡುವುದಿಲ್ಲ' ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com