
ಮದ್ದೂರು: ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಗಣೇಶ ವಿಸರ್ಜನೆಯ ಮೆರವಣಿಗೆ ವೇಳೆ ನಡೆದ ಘರ್ಷಣೆ ಇಂದು ತೀವ್ರವಾಗಿದೆ. ಇಂದು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ಮಾಡಲು ಮುಂದಾಗಿದ್ದು, ಪರಿಸ್ಥಿತಿ ಹದಗೆಟ್ಟಿದೆ. ಈ ಹಿನ್ನಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ತುರ್ತು ಚರ್ಚೆ ನಡೆಸಿದ್ದು, ಪೊಲೀಸರಿಗೆ ಅಗತ್ಯ ಸೂಚನೆ ನೀಡಿದ್ದಾರೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ (DGP) ಡಾ. ಎಂ.ಎ. ಸಲೀಂ ಅವರಿಗೆ ಕರೆ ಮಾಡಿ ವಿವರವಾದ ಮಾಹಿತಿಯನ್ನು ಪಡೆದಿರುವ ಮುಖ್ಯಮಂತ್ರಿಗಳು, ಪರಿಸ್ಥಿತಿಯನ್ನು ತಕ್ಷಣ ನಿಯಂತ್ರಣಕ್ಕೆ ತರಲು ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿಗಳ ಸೂಚನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಜಿಪಿ ಎಂ.ಎ. ಸಲೀಂ ಅವರೊಂದಿಗೆ ಚರ್ಚಿಸಿ, ಘಟನೆಯ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಪರಿಸ್ಥಿತಿಯನ್ನು ಕೂಡಲೇ ತಿಳಿಗೊಳಿಸಿ, ಅಗತ್ಯ ಕ್ರಮ ಕೈಗೊಳ್ಳಿ. ಕಲ್ಲು ತೂರಾಟದಲ್ಲಿ ಭಾಗಿಯಾದವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಿ. ತಪ್ಪಿತಸ್ಥರು ಯಾರೇ ಆಗಿರಲಿ, ಕೂಡಲೇ ಬಂಧಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸಿಎಂ ಸ್ಪಷ್ಟ ಆದೇಶ ನೀಡಿದ್ದಾರೆ. ಈ ಸೂಚನೆಯು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಗಂಭೀರತೆಯನ್ನು ಒತ್ತಿಹೇಳುತ್ತದೆ.
ಗಲಭೆಯ ಬಗ್ಗೆ ಮಾಹಿತಿ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿಯನ್ನು ಭೇಟಿಯಾಗಿ ಮಾಹಿತಿ ಪಡೆದಿದ್ದಾರೆ. ಈ ಸಂಬಂಧ ಚೆಲುವರಾಯಸ್ವಾಮಿ ಕಾವೇರಿ ನಿವಾಸದಲ್ಲಿ ಸಿಎಂ ಭೇಟಿಯಾಗಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಪೊಲೀಸರಿಂದ ಲಾಠಿಚಾರ್ಜ್
ಇನ್ನು ಮದ್ದೂರು ಪಟ್ಟಣದಲ್ಲಿ ನಿನ್ನೆ ಗಣೇಶ ಮೂರ್ತಿ ವಿಸರ್ಜನೆ ವೇಳೆ ಕಲ್ಲು ತೂರಾಟ ನಡೆದ ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಜನರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ದೇಶದಲ್ಲಿ 144 ಸೆಕ್ಷನ್ ವಿಧಿಸಲಾಗಿದ್ದು, ಕೆಲವು ಜನರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ತಿಳಿಸಿದ್ದಾರೆ.
ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಹಿಂದೂ ಪರ ಸಂಘಟನೆಗಳು ಮದ್ದೂರಿನಲ್ಲಿ ತೀವ್ರ ಪ್ರತಿಭಟನೆನಡೆಸಿದೆ. ಮದ್ದೂರು ಬಂದ್ ಮಾಡಿ ರಸ್ತೆಗಳಿದ ಹೋರಾಟಗಾರರ ಆಕ್ರೋಶ ಭುಗಿಲೆದ್ದಿದೆ. ಮಸೀದಿ ಮೇಲೆ ಕಲ್ಲು ತೂರಾಟ ನಡೆದಿದೆ ಎನ್ನಲಾಗುತ್ತಿದ್ದು ಪೊಲೀಸರು ಹರಸಾಹಸಪಡುತ್ತಿದ್ದಾರೆ.
ಮದ್ದೂರಿನಲ್ಲಿ ಭುಗಿಲೆದ್ದ ಕೋಮು ಘರ್ಷಣೆ
ಮದ್ಧೂರಿನಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದೆ. ಮದ್ದೂರಿನ ಹೂವಿನ ಸರ್ಕಲ್ ಬಳಿ ಮುಸ್ಲಿಂರ ಹಸಿರು ಬಾವುಟ ಕಿತ್ತು ಹಿಂದೂಗಳ ಕೇಸರಿ ಬಾವುಟ ಹಾರಿಸಿದ್ದಾರೆ ಎನ್ನಲಾಗುತ್ತಿದೆ. ಹೂವಿನ ವೃತ್ತದಲ್ಲಿ ಹಾರಾಡುತ್ತಿದ್ದ ಮುಸ್ಲಿರ ಭಾವುಟವನ್ನ ಹಿಂದೂ ಕಾರ್ಯಕರ್ತರು ಕಿತ್ತು ಹಾಕಿದ್ದಾರೆ.
ಈ ಬಗ್ಗೆ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿ, ತಮಿಳುನಾಡು ಕಾಲನಿಯಿಂದ ಹೊರಟ ಮೆರವಣಿಗೆಯ ಸಂದರ್ಭದಲ್ಲಿ ಒಂದು ಮಸೀದಿಯ ಬಳಿ ಕಲ್ಲು ತೂರಾಟ ನಡೆದಿದೆ. ನಂತರ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದು, ಕರೆಂಟ್ ಕೂಡ ಆಫ್ ಆಯಿತು ಎಂದು ವರದಿಯಾಗಿದೆ ಎಂದಿದ್ದಾರೆ.
ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ, ಗಣೇಶ ಮೂರ್ತಿ ವಿಸರ್ಜನೆಗೆ ಅವಕಾಶ ಮಾಡಿಕೊಟ್ಟರು. ಈ ಘಟನೆಗೆ ಸಂಬಂಧಿಸಿದಂತೆ ಎರಡು ಪ್ರಕರಣ ದಾಖಲಾಗಿದ್ದು, 21 ಜನರನ್ನು ಬಂಧಿಸಲಾಗಿದೆ. ಹೆಚ್ಚಿನ ಆರೋಪಿಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಮತ್ತು ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ ಎಂದರು.
Advertisement