
ಬೆಂಗಳೂರು: ಚುನಾವಣೆಯ ಸಮಯದಲ್ಲಿ ಪಾರದರ್ಶಕತೆ ಸುಧಾರಿಸಲು ನೈತಿಕ ಹ್ಯಾಕಥಾನ್ ನಡೆಸಲು ಅನುಮತಿ ನೀಡುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಸೋಮವಾರ ಆಗ್ರಹಿಸಿದ್ದಾರೆ.
ಈ ಸಂಬಂಧ ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಅವರು, ಡಿಸೆಂಬರ್ 3, 2024 ರಂದು, ಇವಿಎಂಗಳ ಕಾರ್ಯನಿರ್ವಹಣೆ ಮತ್ತು ಸಂಬಂಧಿತ ಕಾರ್ಯವಿಧಾನದ ದುರ್ಬಲತೆಗಳ ಬಗ್ಗೆ ಕಳವಳಗಳನ್ನು ವಿವರಿಸಿ ಚುನಾವಣಾ ಆಯೋದಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಹಾರ್ಡ್ವೇರ್ ಮತ್ತು ಫರ್ಮ್ವೇರ್ನಿಂದ ಚಿಹ್ನೆ-ಲೋಡಿಂಗ್, ಸಂಗ್ರಹಣೆ, ಚಲನೆ ಮತ್ತು ಎಣಿಕೆ ಪ್ರಕ್ರಿಯೆಗಳವರೆಗೆ ಸಂಪೂರ್ಣ ಇವಿಎಂ-ವಿವಿಪ್ಯಾಟ್ ಪ್ರಕ್ರಿಯೆಗಳನ್ನು ಸಂಸ್ಥೆಯ ನೇತೃತ್ವದಲ್ಲಿ ಪಾರದರ್ಶಕ ಮೌಲ್ಯಮಾಪನ ಮಾಡುವಂತೆ ಮನವಿ ಮಾಡಲಾಗಿತ್ತು.
ಈ ವಿಷಯವನ್ನು ಚುನಾವಣಾ ಆಯೋಗವು ಗಂಭೀರವಾಗಿ ಪರಿಗಣಿಸಿ ಮತ್ತು ರಾಜ್ಯ ಸರಕಾರವು ಪ್ರಮುಖ ಸಂಸ್ಥೆಗಳು (ಐಐಎಸ್ಸಿ, ಐಐಟಿಗಳು, ಐಐಐಟಿಗಳು) ಮತ್ತು ಹೆಸರಾಂತ ಆರ್ ಅಂಡ್ ಡಿ ಕಾರ್ಪೊರೇಟ್ ಸಂಸ್ಥೆಗಳೊಂದಿಗೆ ಸಮಯಕ್ಕೆ ಸೀಮಿತವಾದ, ಸ್ವತಂತ್ರವಾಗಿ ಮೇಲ್ವಿಚಾರಣೆ ಮಾಡಲಾದ ತಾಂತ್ರಿಕ ಪರಿಶೋಧನೆಯನ್ನು ನಡೆಸಲು ಅನುಮತಿ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಕೇಂದ್ರೀಯ ಸಂಸ್ಥೆಗಳ ಸ್ವಾತಂತ್ರ್ಯ ಮತ್ತು ಚುನಾವಣೆಗಳ ಸಮಗ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿರುವ ಸಮಯದಲ್ಲಿ, ಪಾರದರ್ಶಕತೆಯನ್ನು ಸುಧಾರಿಸುವ ಪ್ರಸ್ತಾಪಗಳನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ. ಇವುಗಳನ್ನು ನಿರ್ಲಕ್ಷಿಸುವುದರಿಂದ ಅನುಮಾನಗಳು ಹೆಚ್ಚಾಗುತ್ತವೆ. ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕ ನಂಬಿಕೆಯನ್ನು ಕಾಪಾಡುವ ಹಿತದೃಷ್ಟಿಯಿಂದ, ಪ್ರಸ್ತಾವನೆಯ ಮೇಲೆ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
Advertisement