
ನವದೆಹಲಿ/ಬೆಂಗಳೂರು: ರಾಜ್ಯದ ಬಿಜೆಪಿ ನಿಯೋಗ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಸೋಮವಾರ ಭೇಟಿ ಮಾಡಿದ್ದು. ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನಡೆ ಕುರಿತು ಕಳವಳ ವ್ಯಕ್ತಪಡಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಇತರೆ ನಾಯಕರಿದ್ದ ಬಿಜೆಪಿ ನಿಯೋಗ ನಿನ್ನೆ ಸಂಜೆ ಅಮಿತ್ ಶಾ ಅವರನ್ನು ಭೇಟಿ ಮಾಡಿದರು.
ಅಮಿತ್ ಶಾ ಅವರೊಂದಿಗೆ ಸುಮಾರು 30 ನಿಮಿಷ ಚರ್ಚೆ ನಡೆಸಿದ ನಿಯೋಗವು, ‘ಧರ್ಮಸ್ಥಳದ ವಿರುದ್ಧದ ಪಿತೂರಿಯಲ್ಲಿ ಹೊರ ರಾಜ್ಯದ ಕೆಲವರ ಕೈವಾಡ ಇದೆ. ಈ ಬಗ್ಗೆ ಉನ್ನತ ತನಿಖೆ ನಡೆಸುವ ಅಗತ್ಯ ಇದೆ ಎಂದು ಹೇಳಿದ್ದು, ಇದೇ ವೇಳೆ ಹಿಂದೂ ವಿರೋಧಿ ನಡೆ ಕುರಿತು ಕಳವಳ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.
ಅಮಿತ್ ಶಾ ಅವರೊಂದಿಗೆ ಮಾತುಕತೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ ಅವರು, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿದೆ. ಕೋಮು ಉದ್ವಿಗ್ನತೆಯ ಬಗ್ಗೆ ಗೃಹ ಸಚಿವರಿಗೆ ಮಾಹಿತಿ ನೀಡಲಾಗಿದೆ. ಧರ್ಮಸ್ಥಳ ಕೇಸ್, ಮಂಗಳೂರಿನ ಸುಹಾಸ್ ಶೆಟ್ಟಿ ಹತ್ಯೆ ಮತ್ತು ಹಿಂದೂ ಕಾರ್ಯಕರ್ತ ಗವಿಸಿದ್ಧಪ್ಪ ಹತ್ಯೆ ಘಟನೆಯ ಬಗ್ಗೆ ಮಾಹಿತಿ ನೀಡಲಾಗಿದೆ.
ನಾವು ಔಪಚಾರಿಕ ವರದಿಯನ್ನು ಸಲ್ಲಿಸಿಲ್ಲ. ರಾಜ್ಯದ ಪರಿಸ್ಥಿತಿ ಹದಗೆಡುತ್ತಿರುವ ಬಗ್ಗೆ ಮತ್ತು ಕಾಂಗ್ರೆಸ್ ಸರ್ಕಾರವು ಹಿಂದೂ ಕಾರ್ಯಕರ್ತರು ಮತ್ತು ಸಂಸ್ಥೆಗಳನ್ನು ಪದೇ ಪದೇ ಗುರಿಯಾಗಿಸಿಕೊಂಡಿರುವ ಬಗ್ಗೆ ಗೃಹ ಸಚಿವರಿಗೆ ತಿಳಿಸಿದ್ದೇವೆ. ನಿಷ್ಕ್ರಿಯತೆ ಅಥವಾ ಸಮಾಧಾನಗೊಳಿಸುವ ಮೂಲಕ ಹಿಂದೂ ವಿರೋಧಿ ಭಾವನೆಯನ್ನು ಬೆಳೆಸಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ. ಪರಿಸ್ಥಿತಿಯನ್ನು ಅರಿತುಕೊಂಡು, ಅಗತ್ಯವಿದ್ದರೆ, ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಮತ್ತು ಕೋಮು ಸಾಮರಸ್ಯವನ್ನು ಕಾಪಾಡಲು ಕೇಂದ್ರವು ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಲಾಗಿದೆ.
ಈ ನಡುವೆ ಬಿಜೆಪಿ ನಿಯೋಗದ ಸಲಹೆಗಳನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ನಿಯೋಗದಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಂಗಳೂರು ಸಂಸದ ಬ್ರಿಜೇಶ್ ಚೌಟ, ಉಡುಪಿ ಸಂಸದ ಶ್ರೀನಿವಾಸ್ ಪೂಜಾರಿ, 'ಧರ್ಮಸ್ಥಳ ಚಲೋ' ರ್ಯಾಲಿಯನ್ನು ಆಯೋಜಿಸಿದ್ದ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್, ಶಾಸಕ ಹರೀಶ್ ಪೂಂಜಾ ಮತ್ತು ಇತರರು ಇದ್ದರು.
Advertisement