
ಮಂಡ್ಯ: ಮದ್ದೂರಿನಲ್ಲಿಂದು (ಬುಧವಾರ) ಸಾಮೂಹಿಕ ಗಣೇಶ ವಿಸರ್ಜನೆ ನಡೆಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭದ್ರತೆ ಹೆಚ್ಚಿಸಲಾಗಿದೆ.
ಸಾಮೂಹಿಕ ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಮದ್ದೂರಿನಲ್ಲಿ ಮಂಗಳವಾರ ಕೃಷಿ ಮತ್ತು ಜಿಲ್ಲಾ ಸಚಿವ ಎನ್. ಚಲುವರಾಯಸ್ವಾಮಿ, ಜಿಲ್ಲಾಧಿಕಾರಿ ಮತ್ತು ಎಸ್ಪಿ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಯಿತು.
ಸಭೆ ಬಳಿಕ ಮಾತನಾಡಿದ ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ (ಐಜಿಪಿ) ಎಂ.ಬಿ. ಬೋರಲಿಂಗಯ್ಯ ಅವರು, ಬುಧವಾರ ಬೆಳಿಗ್ಗೆ 6 ಗಂಟೆಯವರೆಗೆ ತಾಲ್ಲೂಕಿನಲ್ಲಿ ಸೆಕ್ಷನ್ 144 ಜಾರಿಯಲ್ಲಿರುತ್ತದೆ. ಸಾಮೂಹಿಕ ವಿಸರ್ಜನೆಗೆ ಪೊಲೀಸರು ವ್ಯವಸ್ಥೆ ಮಾಡಿದ್ದಾರೆ. ಏಳು ಪೊಲೀಸ್ ವರಿಷ್ಠಾಧಿಕಾರಿಗಳು, ಮೂವರು ಹೆಚ್ಚುವರಿ ಎಸ್‌ಪಿಗಳು ಮತ್ತು 600 ಪೊಲೀಸರನ್ನು ಬಂದೋಬಸ್ತ್‌ಗಾಗಿ ನಿಯೋಜಿಸಲಾಗಿದೆ. ಪ್ರಸ್ತುತ ಸ್ಥಳದಲ್ಲಿ ಪರಿಸ್ಥಿತಿ ಶಾಂತವಾಗಿದೆ ಎಂದು ಹೇಳಿದರು.
ಕಲ್ಲು ತೂರಾಟ ಪೂರ್ವಯೋಜಿತವಾಗಿತ್ತು ಎಂಬ ಆರೋಪದ ಕುರಿತು ಮಾತನಾಡಿದ ಅವರು, “ಮೆರವಣಿಗೆ ಹಾದುಹೋಗುವಾಗ ಬೀದಿ ದೀಪಗಳನ್ನು ಆಫ್ ಮಾಡಲಾಗಿದೆ ಎಂಬ ಅನುಮಾನವಿದೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಮಸೀದಿಯಿಂದ ಕಲ್ಲು ಎಸೆದ ಬಗ್ಗೆ ಯಾವುದೇ ಪುರಾವೆಗಳಿಲ್ಲದಿದ್ದರೂ, ಹತ್ತಿರದ ಬೀದಿಯಿಂದ ಕಲ್ಲುಗಳನ್ನು ತರಲಾಗಿದೆ. ಚನ್ನಪಟ್ಟಣದ ಇಬ್ಬರು ಅಥವಾ ಮೂವರು ವ್ಯಕ್ತಿಗಳು ಸಹ ಭಾಗಿಯಾಗಿದ್ದಾರೆಂದು ಶಂಕಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಪತ್ತೆಯಾದ 25 ಶಂಕಿತರಲ್ಲಿ 22 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಸೋಮವಾರದ ಪ್ರತಿಭಟನಾ ಮೆರವಣಿಗೆ ಘಟನೆಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ, ಒಟ್ಟಾರೆಯಾಗಿ, ಗಿರೀಶ್, ಸೌಮ್ಯ, ರಮ್ಯಾ ಮತ್ತು ಪಲ್ಲವಿ ಸೇರಿದಂತೆ 500 ಜನರ ವಿರುದ್ಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ನ ಸೆಕ್ಷನ್ 189(2), 189(4), 121, 121(2) ಮತ್ತು 190 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂಜು ಮಾಹಿತಿ ನೀಡಿದರು.
ಈ ನಡುವೆ ಇಂದು ಮದ್ದೂರಿನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥ್ ನಾರಾಯಣ್, ಎಂಎಲ್‌ಸಿ ಸಿ.ಟಿ. ರವಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪಿ. ರಾಜೀವ್ ಮತ್ತು ಪ್ರೀತಮ್ ಗೌಡ ಸೇರಿದಂತೆ ಹಲವಾರು ಶಾಸಕರು ಮತ್ತು ಹಿರಿಯ ನಾಯಕರು ಭಾಗವಹಿಸಲಿದ್ದಾರೆಂದು ತಿಳಿದುಬಂದಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಇಂದ್ರೇಶ್ ಅವರು ಮಾತನಾಡಿ, ಅಪರಾಧಿಗಳನ್ನು ಶಿಕ್ಷಿಸುವ ಬದಲು ಹಿಂದೂ ಪ್ರತಿಭಟನಾಕಾರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಕಿಡಿಕಾರಿದ್ದಾರೆ.
500 ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸುವುದು ಅನ್ಯಾಯ. ಬುಧವಾರ ಗಣಪತಿ ಮೂರ್ತಿಗಳ ಸಾಮೂಹಿಕ ವಿಸರ್ಜನೆ ನಡೆಯಲಿದ್ದು, ಅಲ್ಲಿ 20,000 ಕ್ಕೂ ಹೆಚ್ಚು ಭಕ್ತರು ಸೇರುವ ನಿರೀಕ್ಷೆಯಿದೆ ಹೇಳಿದರು.
ಸಚಿವ ಚಲುವರಾಯಸ್ವಾಮಿಯವರು ಮಾತನಾಡಿ, ಸಾಮೂಹಿಕ ಗಣೇಶ ವಿಸರ್ಜನೆಯಲ್ಲಿ ಜನರು ಶಾಂತಿಯುತವಾಗಿ ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.
Advertisement