
ಬೆಂಗಳೂರು: ವಿಶ್ವದ ಪ್ರಸಿದ್ಧ ಲಂಡನ್ ನಗರದ ಥೇಮ್ಸ್ ನದಿ ದಂಡೆಯ ಮೇಲೆ ಸ್ಥಾಪಿಸಲ್ಪಟ್ಟ ವಚನ ಕ್ರಾಂತಿಯ ಹರಿಹಾರ, ವಿಶ್ವಗುರು ಶ್ರೀ ಬಸವಣ್ಣನವರ ಪ್ರತಿಮೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ಭೇಟಿ ನೀಡಿ, ಪ್ರತಿಮೆಗೆ ಗೌರವ ಸಲ್ಲಿಸಿದರು.
ಲಂಡನ್ ಬರೋ ಆಫ್ ಲ್ಯಾಂಬೆತ್‌ನ ಮಾಜಿ ಮೇಯರ್ ನೀರಜ್ ಪಾಟೀಲ್, ಯುಕೆ ಬಸವ ಸಮಿತಿ ವಿ-ಪಿ ಅಭಿಜೀತ್ ಸಾಲಿಮಠ್ ಮತ್ತು ಭಾರತೀಯ ಸಾಗರೋತ್ತರ ಕಾಂಗ್ರೆಸ್ ವಿ-ಪಿ ಗುರ್ಮಿಂದರ್ ರಾಂಧವ ಅವರು ಎಂಎಲ್‌ಸಿ ಮಂಜುನಾಥ ಭಂಡಾರಿ ಅವರನ್ನು ಒಳಗೊಂಡ ನಿಯೋಗವನ್ನು ಸ್ವಾಗತಿಸಿದರು.
ಬಸವಣ್ಣನವರ ಪ್ರತಿಮೆ ಕಂಡ ಕ್ಷಣ ನಮಸ್ಕರಿಸಿದ ಸಚಿವ ಶರಣಪ್ರಕಾಶ್ ಪಾಟೀಲ್ ಅವರು, ಬಸವಾದಿ ಶರಣರ ಪರಂಪರೆಯಲ್ಲಿ ನಡೆಯುವ ನಮ್ಮಂತಹವರಿಗೆ ಹೆಮ್ಮೆ ಎನಿಸುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.
ಬಸವಣ್ಣನವರ ವಚನಗಳು ಇಂದಿಗೂ ಪ್ರಸ್ತುತ ಎನಿಸುತ್ತವೆ. ಲಂಡನ್ ನಗರದ ಥೇಮ್ಸ್ ನದಿಯವರೆಗೂ ಬಸವಣ್ಣನವರ ಕೀರ್ತಿ ಹಬ್ಬಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ ಎಂದರು.
ಇದೇ ವೇಳೆ ಲಂಡನ್ ನಲ್ಲಿರುವ ಬಸವ ಸಮಿತಿಯೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಿದ್ದ ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನವು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಔಪಚಾರಿಕ ಆಹ್ವಾನ ಪತ್ರವನ್ನು ಕೂಡ ಸಚಿವರಿಗೆ ನೀಡಿತು.
ಏಪ್ರಿಲ್ 18, 2026 ರಂದು ಸ್ಮಾರಕ ಸ್ಥಾಪಿಸಿ, 10 ವರ್ಷಗಳು ಪೂರ್ಣಗೊಳ್ಳುತ್ತಿದ್ದು, ಇದರ ಅಂಗವಾಗಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಯಿತು.
Advertisement