ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಬಿಜೆಪಿ ನಾಯಕ ಮತ್ತು ಎಂಎಲ್‌ಸಿ ಸಿ.ಟಿ. ರವಿ ವಿರುದ್ಧ ಪ್ರಕರಣ ದಾಖಲಾಗಿದೆ. ಮದ್ದೂರು ಪೊಲೀಸ್ ಸಬ್‌ಇನ್ಸ್ ಪೆಕ್ಟರ್ ನೀಡಿದ ದೂರಿನನ್ವಯ ಸಿಟಿ ರವಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ದೂರು ಹಿನ್ನೆಲೆಯಲ್ಲಿ ಅನ್ಯ ಸಮುದಾಯಗಳ ಮಧ್ಯೆ ದ್ವೇಷ ಉಂಟು ಮಾಡುವ ಮತ್ತು ಸೌಹಾರ್ದತಾ ಭಾವನೆಗಳನ್ನು ಕೆರಳಿಸುವ, ದ್ವೇಷ ಉಂಟಾಗುವಂತೆ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ BNS ಸೆಕ್ಷನ್ 196 (1)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಮದ್ದೂರು ಗಣೇಶ ಮೂರ್ತಿ ವಿಸರ್ಜನೆ ವೇಳೆ ಕಲ್ಲೂ ತೂರಾಟ ನಡೆಸಿದ್ದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಜಾರ್ಚ್ ನಡೆಸಿದ್ದು ಇದರ ವಿರುದ್ಧವೂ ಇದೀಗ ಪ್ರಕರಣ ದಾಖಲಾಗಿದೆ. ಈಮಧ್ಯೆ, 14 ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿರುವ ಹಿಂದೂ ಹೋರಾಟಗಾರ ಪುನೀತ್ ಕೆರೆಹಳ್ಳಿಯನ್ನು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಬಸವನಗುಡಿ ಪೊಲೀಸರು ಬಂಧಿಸಿದ್ದು ಕೋರ್ಟ್ ಮುಂದೆ ಹಾಜರುಪಡಿಸಿದರು. ಮುಚ್ಚಳಿಕೆ ಬರೆದುಕೊಡಲು ಪುನೀತ್ ಕೆರೆಹಳ್ಳಿ ನಿರಾಕರಿಸಿದ್ದರಿಂದ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ.
ಶಾಲೆಯ ಹಾಸ್ಟೆಲ್‌ನಲ್ಲಿ 10 ನೇ ತರಗತಿಯ ವಿದ್ಯಾರ್ಥಿಯೊಬ್ಬನಿಗೆ ರ್ಯಾಪಗಿಂಗ್ ಮಾಡಿದ ಆರೋಪದ ಮೇಲೆ ಐವರು ಪಿಯುಸಿ ವಿದ್ಯಾರ್ಥಿಗಳು, ಶಾಲೆಯ ಪ್ರಾಂಶುಪಾಲ ಮತ್ತು ಹಾಸ್ಟೆಲ್ ವಾರ್ಡನ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಬನ್ನೇರುಘಟ್ಟ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯೊಂದರಲ್ಲಿ ಘಟನೆ ನಡೆದಿತ್ತು. ರ್ಯಾ ಗಿಂಗ್ ಕುರಿತು ಸಂತ್ರಸ್ತ ಬಾಲಕ ಪ್ರಾಂಶುಪಾಲರಿಗೆ ದೂರು ನೀಡಿದ್ದರೂ ಪ್ರಾಂಶುಪಾಲರಾಗಲೀ, ವಾರ್ಡನ್ ಆಗಲೀ ಯಾವುದೇ ಕ್ರಮಕೈಗೊಂಡಿಲ್ಲ. ಅಲ್ಲದೆ ದೂರು ನೀಡಿದ್ದಕ್ಕೆ ಕೋಪಗೊಂಡಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಲೈಂಗಿಕ ದೌರ್ಜನ್ಯ ನಡೆಸಿದ್ದು. ಕಬ್ಬಿಣದ ಹ್ಯಾಂಗರ್ ನಿಂದ ಹಲ್ಲೆ ನಡೆಸಿದ್ದಾರೆ. ಹೀಗಾಗಿ ಸಂತ್ರಸ್ತ ವಿದ್ಯಾರ್ಥಿಯ ತಂದೆ ಬನ್ನೇರುಘಟ್ಟ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಚುರುಕುಗೊಳಿಸಿರುವ ಪೊಲೀಸರು ವಿದ್ಯಾರ್ಥಿಗಳ ವಿಚಾರಣೆ ನಡೆಸುತ್ತಿದ್ದಾರೆ.
ಮೈಸೂರು ದಸರಾ ಉದ್ಘಾಟನೆಗೆ ಇನ್ನು ವಾರವಷ್ಟೇ ಬಾಕಿ ಉಳಿದಿದ್ದು, ಲೇಖಕಿ ಬಾನು ಮುಷ್ತಾಕ್ ಆಯ್ಕೆ ವಿರೋಧಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಈಗಾಗಲೇ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇದರ ಬೆನ್ನಲ್ಲೇ ಹೈಕೋರ್ಟ್‌ನಲ್ಲಿ ಮತ್ತೆರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿವೆ. ನಾಡಹಬ್ಬ ಐತಿಹಾಸಿಕ ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್‌ರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದ್ದು ಅವರು ಕನ್ನಡಾಂಬೆ ಬಗ್ಗೆ ಈ ಹಿಂದೆ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು ಹಿಂದೂ ಅಲ್ಲದ ಬಾನು ಮುಷ್ತಾಕ್‌ರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವ ನಿರ್ಧಾರ ವಾಪಸ್ ಪಡೆಯಲು ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಬಿಜೆಪಿ ಬೆಂಬಲಿತ ವಿದ್ಯಾರ್ಥಿ ಸಂಘಟನೆಯಾದ ABVP ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಭಾಗಿಯಾಗಿದ್ದು ಇದೀಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರು, ನಾನು ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ಐ ಯಾಮ್ ಎ ಟ್ರೂ ಕಾಂಗ್ರೆಸ್ ಮ್ಯಾನ್ ಎಂದು ಸ್ಪಷ್ಟಪಡಿಸಿದ್ದಾರೆ. ನಾನಾಗೇ ಎಬಿವಿಪಿ ಕಾರ್ಯಕ್ರಮಕ್ಕೆ ಹೋಗಿರಲಿಲ್ಲ. ನಾನು ದಾರಿಯಲ್ಲಿ ಬರುತ್ತಿದ್ದೆ. ಅಲ್ಲಿ ರಾಣಿ ಅಬ್ಬಕ್ಕ ಮೆರವಣಿಗೆ ಹೊರಟಿತ್ತು. ಅಬ್ಬಕ್ಕನಿಗೆ ಹೂ ಹಾಕಿದೆ ಅಷ್ಟೇ. ಈ ವೇಳೆ ಶಾಸಕ ಷಡಕ್ಷರಿ ನಾನೂ ಒಟ್ಟಿಗೆ ಇದ್ದೆವು. ನಾನು ಯಾವ ಎಬಿವಿಪಿ ಕಾರ್ಯಕ್ರಮವನ್ನೂ ಅಟೆಂಡ್ ಮಾಡಿಲ್ಲ. ವಿವಾದ ಮಾಡುವುದಾದರೆ ಮಾಡಿಕೊಳ್ಳಲಿ. ನನಗೇನೂ ತೊಂದರೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಬೆಂಗಳೂರಿನ ಅತ್ಯಂತ ಚರ್ಚಾಸ್ಪದ ಅವಳಿ ಸುರಂಗ ರಸ್ತೆ ಯೋಜನೆಯ ಕುರಿತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ವಿಚಾರಣೆ ಆರಂಭಿಸಿದೆ. ನಿನ್ನೆ ನಡೆದ ಮೊದಲ ವಿಚಾರಣೆಯಲ್ಲಿ ರಾಜ್ಯ ಸರ್ಕಾರ, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ಯೋಜನಾ ಸಲಹೆಗಾರರಿಗೆ ನೋಟಿಸ್ ಜಾರಿ ಮಾಡುವಂತೆ ಎನ್ ಜಿಟಿ ತೀರ್ಪು ನೀಡಿದೆ. ಸುರಂಗ ರಸ್ತೆ ಯೋಜನೆಯಲ್ಲಿನ ನ್ಯೂನತೆಗಳ ಬಗ್ಗೆ ಗಮನ ಸೆಳೆಯಲು ಬೆಂಗಳೂರು ಪ್ರಜಾ ವೇದಿಕೆ ಮತ್ತು ಇತರರು ಎರಡು ವಾರಗಳ ಹಿಂದೆ ಅರ್ಜಿ ಸಲ್ಲಿಸಿದ್ದರು. ಮುಂದಿನ ವಿಚಾರಣೆಯನ್ನು ಎನ್ ಜಿಟಿ ನವೆಂಬರ್ 3ಕ್ಕೆ ಮುಂದೂಡಿದೆ.
Advertisement