
ಅಹಮದಾಬಾದ್: 2007ರಲ್ಲಿ ನಡೆದಿದ್ದ ಬರ್ಬರ ದರೋಡೆ ಮತ್ತು ಕೊಲೆ ಪ್ರಕರಣದಲ್ಲಿ 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಕೊನೆಗೂ ಬಂಧಿಸುವಲ್ಲಿ ಗುಜರಾತ್ ನ ಸೂರತ್ ಪೊಲೀಸರು ಯಶಸ್ವಿಯಾಗಿದ್ದಾರೆ.
ನರೇಶ್ ಕೇಸ್ರಿಮಲ್ಜಿ ರಾವಲ್ ನನ್ನು ಬಂಧಿತ ಆರೋಪಿಯಾಗಿದ್ದಾನೆ. ನಕಲಿ ಗುರುತಿನ ದಾಖಲೆಗಳೊಂದಿಗೆ ಕರ್ನಾಟಕದ ಉಡುಪಿಯಲ್ಲಿ ವಾಸಿಸುತ್ತಿದ್ದ ರಾವಲ್‌ನನ್ನು ವಿಶೇಷ ಕಾರ್ಯಾಚರಣೆ ಗುಂಪು (SOG) ನಾಟಕೀಯ ಕಾರ್ಯಾಚರಣೆಯೊಂದರಲ್ಲಿ ಬಂಧಿಸಿದೆ.
ಈ ಕುರಿತು ಮಾಹಿತಿ ನೀಡಿದ ಸೂರತ್ ನಗರ ಡಿಸಿಪಿ ರಾಜದೀಪ್ ಸಿಂಗ್ ನಕುಮ್, ಆರೋಪಿ ಬಗ್ಗೆ ಮಾಹಿತಿ ನೀಡುವವರಿಗೆ ರೂ. 45,000 ಬಹುಮಾನ ಘೋಷಿಸಲಾಗಿತ್ತು. 2007 ರಲ್ಲಿ ಆತ ಚಾಲಕನಾಗಿ ಕೆಲಸ ಮಾಡುತ್ತಿದ್ದಾಗ ಸಹಚರನೊಂದಿಗೆ ಸೇರಿಕೊಂಡು ಸೆಕ್ಯುರಿಟಿ ಗಾರ್ಡ್‌ನನ್ನು ಕೊಂದು ದರೋಡೆ ಮಾಡಿದ್ದರು. ಆತನನ್ನು ಉಡುಪಿಯಲ್ಲಿ ಪತ್ತೆ ಹಚ್ಚಿದ ತಂಡ ಕೊನೆಗೆ ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
19 ವರ್ಷಗಳಿಂದ ಪೊಲೀಸರಿಗೆ ಚಳ್ಳೆ ಹಣ್ಣು: 19 ವರ್ಷಗಳ ಕಾಲ ಕಾನೂನಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ ಸೂರತ್‌ನ ಮೋಸ್ಟ್ ವಾಂಟೆಡ್ ಆಗಿದ್ದ ನರೇಶ್ ಕೇಸ್ರಿಮಲ್ಜಿ ರಾವಲ್ ಕೊನೆಗೂ ಆರೆಸ್ಟ್ ಆಗಿದ್ದಾನೆ. 2007 ರ ದರೋಡೆ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ರಾವಲ್ ನನ್ನು ಉಡುಪಿಯಲ್ಲಿ ಸೂರತ್ ಸ್ಪೆಷಲ್ ಆಪರೇಷನ್ ಗ್ರೂಪ್ (ಎಸ್‌ಒಜಿ) ಬಂಧಿಸಿದೆ. ಇಲ್ಲಿ ಆತ ಸುಳ್ಳು ದಾಖಲೆಗಳೊಂದಿಗೆ ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸೆಕ್ಯೂರಿಟಿ ಗಾರ್ಡ್ ಕೊಂದು ಪರಾರಿ: ಸೂರತ್‌ನ ಉಮ್ರಾದಲ್ಲಿದಲ್ಲಿ ರಾವಲ್ ಕುಟುಂಬವೊಂದಕ್ಕೆ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆತನ ಮಗ ವಿದೇಶದಲ್ಲಿದ್ದರು. ಹೀಗಾಗಿ ದರೋಡೆಗೆ ಸಂಚು ರೂಪಿಸಿದ ರಾವಲ್, ತನ್ನ ಸಹಚರ ಸಹಚರರಾದ ರವಿ ಹಾಗೂ ವಿಜಯ್ ಗುಪ್ತಾ ಸಂತೋಷ್ ಗುಪ್ತಾ ಅವರೊಂದಿಗೆ ಸೇರಿಕೊಂಡು ವೃದ್ಧ ದಂಪತಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಇದನ್ನು ತಡೆಯಲು ಬಂದ ಸೆಕ್ಯೂರಿಟಿಯನ್ನು ಕೊಲೆ ಮಾಡಿದ್ದರು. ಬಳಿಕ ಚಿನ್ನಾಭರಣ ಮತ್ತು ರೂ.2 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿಯೊಂದಿಗೆ ಪರಾರಿಯಾಗಿದ್ದರು.
ಆಗಾಗ್ಗೆ ತನ್ನ ಹೆಸರು, ಗುರುತು ಬದಲಾಯಿಸುತ್ತಿದ್ದ ಆರೋಪಿ: ತದನಂತರ ಕಾರ್ಯ ಪ್ರವೃತ್ತರಾದ ಪೊಲೀಸರು, ವಿಜಯ್ ಮತ್ತು ಸಂತೋಷ್ ಗುಪ್ತಾರನ್ನು ಬಂಧಿಸಿದ್ದರು. ಆದರೆ ರಾವಲ್ ಮತ್ತು ಪಾಂಡೆ ಯಾವುದೇ ಸುಳ್ಳಿವು ಸಿಗದಂತೆ ತಲೆಮರೆಸಿಕೊಂಡಿದ್ದರು. ಪ್ರಕರಣದ ಮಾಸ್ಟರ್ ಮೈಂಡ್ ರಾವಲ್, ಪೊಲೀಸರಿಂದ ತಪ್ಪಿಸಿಕೊಳ್ಳಲು ಆಗಾಗ್ಗೆ ಮುಂಬೈ, ಚೆನ್ನೈ, ಬೆಳಗಾವಿ, ಉತ್ತರ ಕನ್ನಡ ನಗರಗಳಲ್ಲಿ ಸುತ್ತಾಡುತ್ತಾ ತನ್ನ ಹೆಸರು ಮತ್ತು ಗುರುತನ್ನು ಆಗಾಗ್ಗೆ ಬದಲಾಯಿಸುತ್ತಿದ್ದ ಎನ್ನಲಾಗಿದೆ.
ಕೊರವ ಸಮುದಾಯದ ಮಹಿಳೆ ವಿವಾಹವಾಗಿದ್ದ ಆರೋಪಿ:
ಈತನ ಬಗ್ಗೆ ಸುಳಿವು ನೀಡುವವರಿಗೆ ರೂ. 45,000 ಬಹುಮಾನ ಘೋಷಿಸಲಾಗಿತ್ತು. ಇತ್ತೀಚೆಗಷ್ಟೇ ಗುಪ್ತಚರ ಮಾಹಿತಿಯಿಂದ ಆತ ಉಡುಪಿಯಲ್ಲಿ ನೆಲೆಸಿದ್ದಾನೆ ಎಂಬ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ SOG ಅಧಿಕಾರಿಗಳು ದಕ್ಷಿಣ ಭಾರತದ ವ್ಯಾಪಾರಿಗಳಂತೆ ವೇಷ ಧರಿಸಿ, ಉಡುಪಿಗೆ ಆಗಮಿಸಿದ್ದು, ಆತನ ಗುರುತನ್ನು ಪತ್ತೆ ಮಾಡಿದ್ದಾರೆ. ಕೊರವ ಸಮುದಾಯದ ಮಹಿಳೆಯನ್ನು ಮದುವೆಯಾಗಿದ್ದ ರಾವಲ್, ಮಾರ್ಬಲ್ ಕಾರ್ಮಿಕ ಮತ್ತು ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಸೂರತ್ ನಗರದ ಉಮ್ರಾ ಪೊಲೀಸ್ ಠಾಣೆಯಲ್ಲಿ ರಾವಲ್ ವಿರುದ್ಧ ಇತರ ಎರಡು ಮನೆ ದರೋಡೆ ಪ್ರಕರಣ ದಾಖಲಾಗಿದ್ದು,ಆತನ ಸಹಚರ ರವಿ ಪಾಂಡೆ ತಲೆಮರೆಸಿಕೊಂಡಿದ್ದು, ಆತನಿಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement