
ಮೈಸೂರು : ಸರ್ಕಾರ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲು ಪರಿಹಾರ ನೀಡುತ್ತದೆ ಆದರೆ ಅದು ಸಾವಿಗೆ ಸಮಾನವಾಗಿರಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಹೇಳಿದರು.
ಹಾಸನ ಅಪಘಾತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಸರ್ಕಾರ ನೀಡಿದ ಪರಿಹಾರವನ್ನು 10 ಲಕ್ಷಕ್ಕೆ ಏರಿಸಬೇಕು ಎಂಬ ಬಿಜೆಪಿಯವರ ಒತ್ತಾಯದ ಕುರಿತು ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುರಂತದಲ್ಲಿ ಮೃತಪಟ್ಟ ಕುಟುಂಬದವರಿಗೆ ಸಾಂತ್ವನ ಹೇಳಲು ರೂ.5 ಲಕ್ಷ ಪರಿಹಾರ ನೀಡಿದ್ದೇವೆ. ಆದರೆ ಸಾವಿಗೆ ಸಮಾನವಾಗಿ ಪರಿಹಾರ ಕೊಡಿ ಅಂತಾ ಒತ್ತಾಯಿಸುವ ಪ್ರಯತ್ನ ಮಾಡಬಾರದು ಎಂದರು.
ಸರ್ಕಾರ ರಸ್ತೆ ಸುರಕ್ಷತಾ ಕಾನೂನು ಜಾರಿ ಮಾಡಿದ್ದು, ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ. ಚಾಲಕರ ತಪ್ಪಿನಿಂದ ಅಪಘಾತವಾಗಿದೆ. ಅದಕ್ಕೆ ಸರ್ಕಾರ ಹೇಗೆ ಹೊಣೆಯಾಗಲು ಸಾಧ್ಯ? ಎಂದು ಪ್ರಶ್ನಿಸಿದ ಮುಖ್ಯಮಂತ್ರಿ, ಮೃತರ ಕುಟುಂಬದವರಿಗೆ ಸಾವಿನ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ ಸಿಎಂ, ಹಾಸನ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರಿಗೆ ಮೃತರ ಸಂಬಂಧಿಕರನ್ನು ಭೇಟಿ ಮಾಡಿ ಪರಿಹಾರ ಘೋಷಣೆ ಮಾಡುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.
ಧರ್ಮಸ್ಥಳ ಪ್ರಕರಣ; ತನಿಖೆಯಲ್ಲಿ ವಿಳಂಬವಾಗುತ್ತಿಲ್ಲ: ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿ ತನಿಖೆ ವಿಳಂಬವಾಗುತ್ತಿದೆಯಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ತನಿಖೆಯಲ್ಲಿ ವಿಳಂಬವಾಗುತ್ತಿಲ್ಲ. ಎಸ್ಐಟಿ ತನಿಖೆ ಮಾಡುತ್ತಿದ್ದು, ಸರ್ಕಾರ ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಹಾಗೆಂದು ಅನಗತ್ಯವಾಗಿ ವಿಳಂಬ ಮಾಡುವಂತಿಲ್ಲ. ನನಗೆ ತಿಳಿದಂತೆ ವಿಳಂಬವಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಆಲಮಟ್ಟಿ ಅಣೆಕಟ್ಟನ್ನು ಎತ್ತರಿಸುವ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಆಕ್ಷೇಪ ಕುರಿತು ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನ್ಯಾಯಮಂಡಳಿಯೇ ಅಣೆಕಟ್ಟನ್ನು 519 ಮೀ. ಗಳಿಂದ 524 ಮೀ.ವರೆಗೆ ಏರಿಸಲು 2010 ರಲ್ಲಿ ಹೇಳಿದೆ. ಅದಕ್ಕೆ 15 ವರ್ಷಗಳಾಗಿದ್ದು, ರಾಜಕಾರಣಕ್ಕಾಗಿ ಆಕ್ಷೇಪ ತೆಗೆದಿದ್ದಾರೆ. ಮಹದಾಯಿ ಯೋಜನೆಯನ್ನು ಗೋವಾ ಹಾಗೂ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಿವೆ. ಬಿಜೆಪಿ ಮುಖ್ಯಮಂತ್ರಿಗಳಿಗೆ ಪ್ರಧಾನಮಂತ್ರಿ ತಿಳಿ ಹೇಳಬೇಕು ಎಂದರು.
ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವ ಜಾತಿ ಗಣತಿಯಲ್ಲಿ ಹೊಸ ಜಾತಿಗಳನ್ನು ಸರ್ಕಾರ ಸೇರ್ಪಡೆ ಮಾಡುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಕೇಂದ್ರ ಸರ್ಕಾರ ಕೈಗೊಂಡಿರುವ ಜಾತಿ ಗಣತಿ ಬಗ್ಗೆ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಯಾರಾದರೂ ಮತಾಂತರಗೊಂಡಿದ್ದರೆ ಅವರ ಈಗಿನ ಜಾತಿಯನ್ನೇ ಪರಿಗಣಿಸಲಾಗುವುದು. ಮತಾಂತರವಾಗುವುದು ಬೇಡ ಎಂದರೂ ವ್ಯವಸ್ಥೆಯ ಪರಿಣಾಮವಾಗಿ ಮತಾಂತರಗೊಳ್ಳುತ್ತಾರೆ. ಹಿಂದೂ ಸಮಾಜದಲ್ಲಿ ಸಮಾನತೆ ಇದ್ದಿದ್ದರೆ, ಸಮಾನ ಅವಕಾಶಗಳಿದ್ದರೆ, ಏಕೆ ಮತಾಂತರಗೊಳ್ಳುತ್ತಾರೆ? ಅಸ್ಪೃಶ್ಯತೆ ಏಕೆ ಬಂತು?. ಅದನ್ನು ನಾವು ಹುಟ್ಟುಹಾಕಿದ್ದೇವೆಯೇ? ಎಂದರು. ಅಸಮಾನತೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಧರ್ಮದಲ್ಲಿ ಇದ್ದರೂ ಮತಾಂತರವಾಗಿದ್ದಾರೆ. ಅದು ಅವರ ಹಕ್ಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
Advertisement