
ಹಾಸನ: ಗಣೇಶೋತ್ಸವ ಮೆರವಣಿಗೆ ವೇಳೆ ಟ್ರಕ್ ನುಗ್ಗಿ ಸಂಭವಿಸಿದ ಭೀಕರ ಅಪಘಾತದಲ್ಲಿ 10 ಜನ ಮೃತಪಟ್ಟಿದ್ದು 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಾನಸದ ಮೊಸಳೆ ಹೊಸಳ್ಳಿಯಲ್ಲಿ ನಡೆದಿದ್ದ ಈ ದುರಂತ ಮನಸ್ಸು ಕದಡುವಂತೆ ಮಾಡಿದೆ. ಇನ್ನು ಘಟನಾ ಸ್ಥಳಕ್ಕೆ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು ತೆರಳಿದ್ದು ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಹಾಸನದ ಹಿಮ್ಸ್ ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ಭೇಟಿ ಮಾಡಿದರು. ಇದೇ ವೇಳೆ ಮಾತನಾಡಿದ ಅವರು, ನನ್ನಮ್ಮು ಹುಟ್ಟಿದ ಊರು ಇದು. ಮನಸ್ಸು ತಡಿಯಲಿಲ್ಲ. ಅದಕ್ಕಾಗಿ ಬಂದೆ ಎಂದು ಹೇಳಿದ್ದಾರೆ. ಇನ್ನು ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಜೆಡಿಎಸ್ ಪಕ್ಷದ ವತಿಯಿಂದ ತಲಾ 1 ಲಕ್ಷ ರೂ. ಪರಿಹಾರ ನೀಡುವುದಾಗಿ ದೇವೇಗೌಡ ಘೋಷಣೆ ಮಾಡಿದರು.
ಗಂಭೀರವಾಗಿ ಗಾಯಗೊಂಡವರಿಗೆ 25 ಸಾವಿರ ರೂ., ಸ್ವಲ್ಪ ಪ್ರಮಾಣದಲ್ಲಿ ಗಾಯಗೊಂಡವರಿಗೆ 20 ಸಾವಿರ ರೂ., ಚಿಕ್ಕಪುಟ್ಟ ಗಾಯಗೊಂಡವರಿಗೆ ತಲಾ 15 ಸಾವಿರ ರೂ. ಪರಿಹಾರ ನೀಡುವುದಾಗಿ ಘೋಷಿಸಿದರು. ಸರ್ಕಾರ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದ ದೇವೇಗೌಡ, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಮಾಡುತ್ತೇನೆ ಎಂದರು.
Advertisement