
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ(GBA) ನಗರದಲ್ಲಿ ಕಂಡ ಕಂಡಲ್ಲಿ ಕಸ ಎಸೆಯುವವರಿಗೆ ಭಾರಿ ಪ್ರಮಾಣದ ದಂಡ ವಿಧಿಸಲು ನಿರ್ಧರಿಸಿದ್ದು, ಸಾರ್ವಜನಿಕರು ರಸ್ತೆ ಬದಿ ಕಸ ಸುರಿಯುವ ಮುನ್ನ ಮತ್ತು ಏಕ-ಬಳಕೆ ಪ್ಲಾಸ್ಟಿಕ್ ನಿಷೇಧವನ್ನು ಉಲ್ಲಂಘಿಸುವ ಮೊದಲು ಒಮ್ಮೆ ಯೋಚಿಸಿ.
ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್(BSWML) ಪದೆಪದೇ ಕಂಡ ಕಂಡಲ್ಲಿ ಕಸ ಎಸೆಯುವ ಪುನರಾವರ್ತಿತ ಅಪರಾಧಿಗಳಿಗೆ 2,000 ರೂ. ದಂಡ ವಿಧಿಸಲು ತೀರ್ಮಾನಿಸಿದೆ.
ಇನ್ನೂ ಏಕ-ಬಳಕೆಯ ಪ್ಲಾಸ್ಟಿಕ್ ವಿರುದ್ಧದ ಅಭಿಯಾನದ ಸಮಯದಲ್ಲಿ BSWML ಈಗಾಗಲೇ ತನ್ನ ಸಿಬ್ಬಂದಿಗೆ ಕನಿಷ್ಠ 2,000 ರೂ. ದಂಡ ವಿಧಿಸಲು ಅಧಿಕಾರ ನೀಡಿದೆ.
ಮನೆ ಮುಂದೆ ಕಸದ ವಾಹನ ಬಂದರೂ ಕಸ ಹಾಕದೆ ರಸ್ತೆ ಬದಿಗಳಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಬಿಸಿ ಮುಟ್ಟಿಸಬೇಕು ಎಂಬ ಉದ್ದೇಶದಿಂದ ಇಂತಹ ಕಠಿಣ ತೀರ್ಮಾನ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು BSWML ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕರೀಗೌಡ ಅವರು ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕರೀಗೌಡ ಅವರು, ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಮೊದಲ ಬಾರಿಗೆ 500 ರೂ. ದಂಡ ವಿಧಿಸಲಾಗುವುದು ಮತ್ತೆ ಅವರು ಇಂತಹದ್ದೇ ಧೋರಣೆ ಮುಂದುವರೆಸಿದರೆ 2000 ರೂ.ಗಳ ದಂಡ ವಿಧಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಅದೇ ರೀತಿ ನಗರದಲ್ಲಿ ಹೆಚ್ಚಾಗ್ತಿರೋ ಪ್ಲಾಸ್ಟಿಕ್ ಹಾವಳಿ ಸಮರ್ಪಕ ಕಸ ನಿರ್ವಹಣೆಗೆ ಅಡ್ಡಿಯಾಗುತ್ತಿರುವ ಹಿನ್ನೆಲೆಯಲ್ಲಿ ಎಕ ಬಳಕೆ ಪ್ಲಾಸ್ಟಿಕ್‌ಗೆ ಸಂಪೂರ್ಣ ಕಡಿವಾಣ ಹಾಕುವ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
"ನಗರದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ತಡೆಯಲು ಬಿಎಸ್‌ಡಬ್ಲ್ಯೂಎಂಎಲ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕರ ನೇತೃತ್ವದಲ್ಲಿ ನಾವು 27 ವಿಶೇಷ ಜಾರಿ ತಂಡಗಳನ್ನು ರಚಿಸಿದ್ದೇವೆ ಮತ್ತು ಪ್ರತಿ ವಾರ ಐದು ವಾರ್ಡ್‌ಗಳಲ್ಲಿ ತಪಾಸಣೆ ನಡೆಸಲು ಸೂಚನೆ ನೀಡಿದ್ದೇವೆ" ಎಂದು ಕರೀಗೌಡ ಹೇಳಿದರು.
ಕೇಂದ್ರ ಕಚೇರಿಯಿಂದ ಕಾರ್ಯನಿರ್ವಹಿಸುವ ಈ ತಂಡಗಳು ಸೆಪ್ಟೆಂಬರ್ 8 ರಿಂದ ವಾರದಲ್ಲಿ ಐದು ದಿನ ಪ್ಲಾಸ್ಟಿಕ್ ತಯಾರಕರು ಮತ್ತು ಸಗಟು ವ್ಯಾಪಾರಿಗಳು ಸೇರಿದಂತೆ ಹಲವು ಸ್ಥಳಗಳಲ್ಲಿ ದಾಳಿ ನಡೆಸುತ್ತಿವೆ ಎಂದರು.
"ಹೆಚ್ಚುವರಿಯಾಗಿ, ವಾರ್ಡ್ ಮಟ್ಟದಲ್ಲಿ ವಾರ್ಡ್ ಮಾರ್ಷಲ್‌ಗಳು ಮತ್ತು ಕಿರಿಯ ಆರೋಗ್ಯ ನಿರೀಕ್ಷಕರು ಪ್ರತಿದಿನ ಪ್ಲಾಸ್ಟಿಕ್ ದಾಳಿ ನಡೆಸಿ ಪ್ರತಿ ಪ್ರಕರಣಕ್ಕೂ ಕನಿಷ್ಠ 2,000 ರೂ. ದಂಡ ವಿಧಿಸಲು ನಿರ್ದೇಶಿಸಲಾಗಿದೆ" ಎಂದು ಅವರು ಹೇಳಿದರು.
ಸೆಪ್ಟೆಂಬರ್ 3 ರಂದು ಪ್ಲಾಸ್ಟಿಕ್ ವಿರುದ್ಧ ಕ್ರಮ ಕೈಗೊಂಡಾಗಿನಿಂದ, 281 ಸಗಟು ವ್ಯಾಪಾರಿಗಳಿಂದ ಒಟ್ಟು 19.66 ಲಕ್ಷ ರೂ. ಮತ್ತು 2,842 ಚಿಲ್ಲರೆ ವ್ಯಾಪಾರಿಗಳಿಂದ 18.41 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ ಎಂದು ಅವರು ತಿಳಿಸಿದರು.
Advertisement