News headlines 14-09-2025 | ಮತ್ತೆ ವಿದ್ಯುತ್ ದರ ಏರಿಕೆಗೆ ಬೆಸ್ಕಾಮ್ ಪ್ರಸ್ತಾವನೆ; ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ದೂರು; ಮಕ್ಕಳ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಪತ್ತೆ; 24 ಗಂಟೆಗಳಲ್ಲಿ ಮಗು ರಕ್ಷಣೆ

News headlines 14-09-2025 | ಮತ್ತೆ ವಿದ್ಯುತ್ ದರ ಏರಿಕೆಗೆ ಬೆಸ್ಕಾಮ್ ಪ್ರಸ್ತಾವನೆ; ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ದೂರು; ಮಕ್ಕಳ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಪತ್ತೆ; 24 ಗಂಟೆಗಳಲ್ಲಿ ಮಗು ರಕ್ಷಣೆ

1. Dharmasthala Case: ಸೌಜನ್ಯ ಪ್ರಕರಣದಲ್ಲಿ ಅಪಪ್ರಚಾರ; ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ದೂರು

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ವಿಚಾರಣೆ ಮುಂದುವರೆದಿರುವುದರ ನಡುವೆಯೇ, ಸೌಜನ್ಯ ಪ್ರಕರಣದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಪ್ರಕರಣ ದಾಖಲಿಸಿ, ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಬೆಳ್ತಂಗಡಿ ಸರ್ಕಲ್ ಇನ್‌ಸ್ಪೆಕ್ಟರ್‌ಗೆ ದೂರು ನೀಡಲಾಗಿದೆ.

ಬೆಳ್ತಂಗಡಿ ತಾಲ್ಲೂಕಿನ ಇಂದಬೆಟ್ಟು ನಿವಾಸಿ, ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ವೆಂಕಪ್ಪ ಕೋಟ್ಯಾನ್ ದೂರು ದಾಖಲಿಸಿದ್ದಾರೆ. ಮೈಸೂರಿನ ನಿವಾಸಿಯಾಗಿರುವ ಸ್ನೇಹಮಯಿಯನ್ನು ಸೌಜನ್ಯ ಕೊಲೆಗಾರರೇ ಧರ್ಮಸ್ಥಳಕ್ಕೆ ಕರೆಸಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಸೌಜನ್ಯ ಅವರ ಕುಟುಂಬ ಮತ್ತು ನಾವು ನ್ಯಾಯಕ್ಕಾಗಿ ಹೋರಾಡುತ್ತಿದ್ದೇವೆ. ಸ್ನೇಹಮಯಿ ಕೃಷ್ಣ ಎಂಬ ವ್ಯಕ್ತಿ ಯಾರದ್ದೋ ಸೂಚನೆಯ ಮೇರೆಗೆ ವಿಠಲ್ ಗೌಡ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿದ್ದಾರೆ. ನಮ್ಮ ಹೋರಾಟವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸಿದ್ದಾರೆ. ಸೌಜನ್ಯ ಅವರ ಕೊಲೆಗಾರರು ದೂರು ದಾಖಲಿಸಲು ಕೃಷ್ಣ ಅವರನ್ನು ಕರೆತಂದಿರಬಹುದು ಎಂದು ನಮಗೆ ಅನುಮಾನ ಬಂದಿದೆ ಎಂದು ವೆಂಕಪ್ಪ ಕೋಟ್ಯಾನ್ ಆರೋಪಿಸಿದ್ದಾರೆ.

2. ಗಣೇಶ ವಿಸರ್ಜನೆ ವೇಳೆ ಲಾಠಿ ಚಾರ್ಜ್ ಗೆ ಜೋಶಿ ಖಂಡನೆ; ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆಯ ಎಚ್ಚರಿಕೆ

ಧಾರವಾಡದಲ್ಲಿರುವ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಎಚ್ಚರಿಕೆ ನೀಡಿದ್ದಾರೆ. ಅವರು ಮಾತನಾಡುತ್ತಿರುವಾಗ, ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ಅವರ ಭಾಷಣವನ್ನು ರೆಕಾರ್ಡ್ ಮಾಡುತ್ತಿರುವುದು ಕಂಡುಬಂದಿದೆ. ಕೇಂದ್ರ ಸಚಿವರಾಗಿದ್ದರೂ, ಪೊಲೀಸರು ತಮ್ಮ ಪೂರ್ವಾಗ್ರಹ ಪೀಡಿತ ರೀತಿಯಲ್ಲಿ ವರ್ತಿಸುವುದನ್ನು ಮುಂದುವರಿಸಿದರೆ, ತಾವು ಪ್ರತಿಭಟಿಸಬೇಕಾಗುತ್ತದೆ ಎಂದು ಜೋಶಿ ಎಚ್ಚರಿಕೆ ನೀಡಿದ್ದಾರೆ. ಸೆಪ್ಟೆಂಬರ್ 6 ರಂದು ಗಣೇಶ ವಿಸರ್ಜನೆ ಸಂದರ್ಭದಲ್ಲಿ ನಡೆದ ಲಾಠಿ ಚಾರ್ಜ್‌ಗೆ ಸಂಬಂಧಿಸಿದಂತೆ ಜೋಶಿ ಶನಿವಾರ ರಾತ್ರಿ ನರೇಂದ್ರ ಗ್ರಾಮದಲ್ಲಿ ಮಾತನಾಡುತ್ತಿದ್ದರು.

3. ಬೆಲೆ ಏರಿಕೆಯಿಂದ ಕಂಗೆಟ್ಟ ಜನಕ್ಕೆ ಮತ್ತೆ ಶಾಕ್: ಮತ್ತೆ ವಿದ್ಯುತ್ ದರ ಏರಿಕೆಗೆ BESCOM ಪ್ರಸ್ತಾವನೆ

ಇತ್ತೀಚೆಗಷ್ಟೇ ದರ ಏರಿಕೆ ಬೆಳವಣಿಗಳಿಂದ ಹೈರಾಣಿಗಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ಶೀಘ್ರವೇ ಮತ್ತೆ ವಿದ್ಯುತ್ ದರ ಏರಿಕೆಯಾಗುವ ಸಾಧ್ಯತೆ ಇದೆ. ವಿದ್ಯುತ್ ದರ ಏರಿಕೆ ಮಾಡುವಂತೆ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗಕ್ಕೆ ಬೆಸ್ಕಾಂ ಪ್ರಸ್ತಾವನೆ ಸಲ್ಲಿಸಿದೆ.

ಮೂಲಗಳ ಪ್ರಕಾರ ಪ್ರತಿ ಯೂನಿಟ್ ಗೆ 1 ರೂಪಾಯಿಯಂತೆ ವಿದ್ಯುತ್ ದರ ಏರಿಕೆ ಮಾಡಬೇಕು ಎಂದು ಬೆಸ್ಕಾಂ ಮನವಿ ಮಾಡಿದೆ. ಈಗಾಗಲೇ ವಾಣಿಜ್ಯ, ಕೈಗಾರಿಕಾ ವಲಯಕ್ಕೆ ವಿದ್ಯುತ್ ದರ ಏರಿಕೆ ಮಾಡಿ ಶಾಕ್ ಕೊಟ್ಟಿರುವ ಬೆಸ್ಕಾಂ, ಇದೀಗ ಮತ್ತೆ ವಿದ್ಯುತ್ ದರ ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬೆಸ್ಕಾಂ ಪ್ರಸ್ತಾವನೆಗೆ ಎಫ್ ಕೆಸಿಸಿಐ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

4. ರಾಜ್ಯದಲ್ಲಿ ಸೆಪ್ಟೆಂಬರ್ 16 ವರೆಗೆ ಮಳೆ; ಬೆಂಗಳೂರಿಗೆ ಯೆಲ್ಲೋ ಅಲರ್ಟ್ 

ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರೆಯಲಿದ್ದು ಸೆಪ್ಟೆಂಬರ್ 16 ರವರೆಗೂ ಮಳೆ ಆರ್ಭಟ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಉತ್ತರ ಹಾಗೂ ದಕ್ಷಿಣ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ಮುಂದಿನ ನಾಲ್ಕೈದು ದಿನ ಮಳೆ ಮತ್ತಷ್ಟು ಬಿರುಸುಗೊಳ್ಳುವ ಸಾಧ್ಯತೆ ಇದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಬಳ್ಳಾರಿ, ಮೈಸೂರು, ಮಂಡ್ಯ, ತುಮಕೂರು, ಬೆಳಗಾವಿ, ಬೀದರ್, ಗದಗ, ರಾಯಚೂರು, ಯಾದಗಿರಿ ಹಾಗೂ ವಿಜಯನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ನೀಡಲಾಗಿದೆ. ವಿಜಯಪುರ, ಕಲಬುರಗಿ ಹಾಗೂ ಕೊಪ್ಪಳ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ದಕ್ಷಿಣ ಒಳನಾಡು, ಉಡುಪಿ, ಉತ್ತರ ಕನ್ನಡ, ಹಾವೇರಿ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ದಾವಣಗೆರೆ, ರಾಮನಗರ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

5. Ballari: ಮಕ್ಕಳ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಪತ್ತೆ; 24 ಗಂಟೆಗಳಲ್ಲಿ ಮಗು ರಕ್ಷಣೆ

ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಸಕ್ರಿಯವಾಗಿದ್ದ ಮಕ್ಕಳ ಕಳ್ಳತನ ಮಾಡುವ ಗ್ಯಾಂಗ್ ಅನ್ನು ಪೊಲೀಸರು ಪತ್ತೆಹಚ್ಚಿದ್ದು, ಅಪಹರಣ ನಡೆದ 24 ಗಂಟೆಗಳಲ್ಲಿ ಒಂದೂವರೆ ತಿಂಗಳ ಮಗುವನ್ನು ರಕ್ಷಿಸಿದ್ದಾರೆ.

ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾ ರಾಣಿ ಮಾತನಾಡಿ, ಆರೋಪಿ ಶಮೀಮ್, ಆಕೆಯ ಪತಿ ಇಸ್ಮಾಯಿಲ್ ಮತ್ತು ಸಹಚರ ಬಾಷಾ ಮಗುವನ್ನು ಅಪಹರಿಸಿ, ನಂತರ ತೋರಣಗಲ್ಲಿನ ಬಸವರಾಜ ಮಹಾಂತಪ್ಪ ಎಂಬುವವರಿಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. 19 ವರ್ಷಗಳಿಂದ ಮಕ್ಕಳಿಲ್ಲದ ಬಸವರಾಜ, ಕಠಿಣ ನಿಯಮಗಳಿಂದಾಗಿ ಕಾನೂನುಬದ್ಧವಾಗಿ ದತ್ತು ಪಡೆಯಲು ವಿಫಲವಾದ ನಂತರ ಬಾಷಾ ಎಂಬಾತನನ್ನು ಸಂಪರ್ಕಿಸಿದ್ದ ಎಂದು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಮಗುವಿನ ತಾಯಿ ಬೆಣಕಲ್ಲು ಗ್ರಾಮದ ಶ್ರೀದೇವಿ ತಮ್ಮ ನವಜಾತ ಶಿಶುವಿನ ಜನನ ಪ್ರಮಾಣಪತ್ರವನ್ನು ಪಡೆಯಲು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com