ನಮ್ಮ ಮೆಟ್ರೋ ನಿಲ್ದಾಣಕ್ಕೆ ‘ಸೇಂಟ್ ಮೇರಿ’ ಹೆಸರು: ವಿರೋಧಿಸುತ್ತಿರುವ 'ಮಹಾ' ಸಿಎಂ ಕೇಂದ್ರವನ್ನು ಹೋಗಿ ಕೇಳಲಿ; ಸಿದ್ದರಾಮಯ್ಯ
ಬೆಂಗಳೂರು: ನಮ್ಮ ಮೆಟ್ರೋದ ನಿಲ್ದಾಣವೊಂದಕ್ಕೆ ಸೇಂಟ್ ಮೇರಿ ಹೆಸರಿಡಲು ಹೊರಡಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಇದೀಗ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೂ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ.
ಮೆಟ್ರೋ ನಿಲ್ದಾಣ ಹೆಸರು ಬದಲಾವಣೆ ಕುರಿತು ಪ್ರತಿಕ್ರಿಯೆ ನೀಡಿದ್ದ ದೇವೇಂದ್ರ ಫಡ್ನವೀಸ್ ಅವರು, ಬೆಂಗಳೂರಿನ ಶಿವಾಜಿನಗರ ಮೆಟ್ರೋ ನಿಲ್ದಾಣವನ್ನು ಸೇಂಟ್ ಮೇರಿ ಎಂದು ಮರುನಾಮಕರಣ ಮಾಡಿದ ಕರ್ನಾಟಕ ಸರ್ಕಾರದ ಕ್ರಮವನ್ನು ನಾನು ಖಂಡಿಸುತ್ತೇನೆ. ಇದು ಛತ್ರಪತಿ ಶಿವಾಜಿ ಮಹಾರಾಜರಿಗೆ ಮಾಡಿದ ಅವಮಾನ ಎಂದು ಹೇಳಿದ್ದರು.
ನೆಹರೂ ಅವರ ಕಾಲದಿಂದಲೂ ಕಾಂಗ್ರೆಸ್ ಮರಾಠಾ ಯೋಧ ರಾಜನನ್ನು ಅವಮಾನಿಸುವ ಸಂಪ್ರದಾಯವನ್ನು ಮುಂದುವರೆಸಿದೆ. ನೆಹರೂ ಅವರು ತಮ್ಮ ‘ಡಿಸ್ಕವರಿ ಆಫ್ ಇಂಡಿಯಾ’ ಪುಸ್ತಕದಲ್ಲಿ ಶಿವಾಜಿ ಮಹಾರಾಜರ ವಿರುದ್ಧ ಹೇಳಿಕೆ ನೀಡಿದ್ದಾರೆ. ಧರ್ಮವನ್ನು ಆಧರಿಸಿದ ಮತ್ತು ಮರಾಠಾ ಯೋಧ ರಾಜನ ವಿರುದ್ಧದ ನಿರ್ಧಾರವನ್ನು ಸಿದ್ದರಾಮಯ್ಯ ಮುಂದುವರಿಸದಂತೆ ದೇವರು ಅವರಿಗೆ ಬುದ್ಧಿ ನೀಡಲಿ ಎಂದು ಪ್ರಾರ್ಥಿಸುತ್ತಿದ್ದೇನೆಂದು ತಿಳಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಫಡ್ನವೀಸ್ ಅವರು ಕೇಂದ್ರ ಸರ್ಕಾರವನ್ನು ಹೋಗಿ ಕೇಳಲಿ. ನಮ್ಮ ಮೆಟ್ರೋ ನಿಲ್ದಾಣದ ಹೆಸರು ಬದಲಾವಣೆ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಲಾಗುವುದು. ನಂತರ ಅವರೇ ನಿರ್ಧಾರ ಕೈಗೊಳ್ಳುತ್ತಾರೆ. ಹೀಗಾಗಿ, ಫಡ್ನವೀಸ್ ಅವರು ಕೇಂದ್ರ ಸರ್ಕಾರವನ್ನೇ ಹೋಗಿ ಕೇಳಲಿ ಎಂದು ಹೇಳಿದ್ದಾರೆ.
ಫಡ್ನವೀಸ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಜಿ. ಪರಮೇಶ್ವರ್ ಅವರು, ಬೆಂಗಳೂರಿಗೆ ಸಂಬಂಧಿಸಿದ ವಿಷಯದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಯೇಕೆ ಆಸಕ್ತಿ ತೋರಿಸುತ್ತಿದ್ದಾರೆಂದು ಪ್ರಶ್ನಿಸಿದ್ದಾರೆ.
ಮೆಟ್ರೋ ನಿಲ್ದಾಣಗಳ ಹೆಸರಿಡುವ ಬಗ್ಗೆ ನಿರ್ಧಾರಗಳನ್ನು ಬೆಂಗಳೂರಿನ ಉಸ್ತುವಾರಿ ಸಚಿವರು ಮತ್ತು ಉಪಮುಖ್ಯಮಂತ್ರಿ (ಡಿ. ಕೆ. ಶಿವಕುಮಾರ್) ತೆಗೆದುಕೊಳ್ಳುತ್ತಾರೆಂದು ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ