
ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಪಿತೂರಿ ನಡೆಸಿದವರನ್ನು ಮುಟ್ಟದಂತೆ ಎಸ್‌ಐಟಿ ಮೇಲೆ ರಾಜಕೀಯ ಒತ್ತಡವಿದೆ. ನಿರೀಕ್ಷೆಯಂತೆ ತನಿಖೆ ನಡೆಯುತ್ತಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿಯವರು ಭಾನುವಾರ ಆರೋಪಿಸಿದ್ದಾರೆ.
ಭಾನುವಾರ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಸ್ಕ್ ಮ್ಯಾನ್ನ ದೂರು ಹುಸಿಯಾದ ನಂತರ ಬೇರೆ ಬೇರೆ ದೂರುಗಳು ದಾಖಲಾಗುತ್ತಿವೆ. ಎಸ್ಐಟಿಗೆ ಉತ್ತರದಾಯಿತ್ವ ಇದೆ, ಜವಾಬ್ದಾರಿ ಇದೆ. ಶೀಘ್ರದಲ್ಲೇ ಎಸ್ಐಟಿ ಇಲ್ಲಿವರೆಗೆ ಆಗಿರುವ ತನಿಖೆಯ ಬಗ್ಗೆ ವರದಿ ಕೊಡಲಿ ಎಂದು ಆಗ್ರಹಿಸಿದರು.
ಎಸ್ಐಟಿಯವರು ಷಡ್ಯಂತ್ರ ಮಾಡಿದ ಮುಖ್ಯ ವ್ಯಕ್ತಿಗಳನ್ನೇ ಇನ್ನೂ ಮುಟ್ಟಿಲ್ಲ. ಎಸ್ಐಟಿಯವರು ನಮ್ಮನ್ನು ಮುಟ್ಟಲ್ಲ ಅಂತ ಅವರಿಗೂ ಗ್ಯಾರಂಟಿ ಆಗಿದೆ. ಅದಕ್ಕಾಗಿಯೇ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಹೊಸ ಹೊಸ ದೂರುಗಳು ಬರುತ್ತಿವೆ. ಅವುಗಳನ್ನೂ ತನಿಖೆ ಮಾಡುತ್ತಿದ್ದಾರೆ. ಪಿತೂರಿಗಾರರ ಹಿಂದೆ ಹೋಗದಂತೆ ಎಸ್‌ಐಟಿ ಮೇಲೆ ರಾಜಕೀಯ ಒತ್ತಡವಿದೆ. ಅದಕ್ಕಾಗಿಯೇ, ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಇಲ್ಲಿಯವರೆಗೆ ನಡೆದ ತನಿಖೆಯ ಬಗ್ಗೆ ಎಸ್‌ಐಟಿ ವರದಿ ನೀಡಬೇಕು ಎಂದು ಹೇಳಿದರು.
ಜಾತಿ ಜನಗಣತಿ ಸಮೀಕ್ಷೆ ಮೂಲಕ ಗ್ಯಾರಂಟಿ ಫಲಾನುಭವಿಗಳ ಡೇಟಾ ಸಂಗ್ರಹಕ್ಕೆ ಸರ್ಕಾರ ಮುಂದಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಗ್ಯಾರಂಟಿ ಯೋಜನೆಗಳಿಗೂ ಸಾಮಾಜಿ ಆರ್ಥಿಕ ಸಮೀಕ್ಷೆಗೂ ಏನು ಸಂಬಂಧ. ಇದು ರಾಜಕೀಯ ಪ್ರೇರಿತವಾದ ಸಮೀಕ್ಷೆ. ಗ್ಯಾರಂಟಿ ಫಲಾನುಭವಿಗಳ ಪರಿಶೀಲನೆಗೆ ಮಾಹಿತಿ ಸಂಗ್ರಹ ಜಾತಿ ಜನಗಣತಿಯನ್ನು ರಾಜಕೀಯ ಅಸ್ತ್ರವಾಗಿ ಬಳಸಲು ಡಿಸಿಎಂ ಡಿ.ಕೆ.ಶಿವಕುಮಾರ್ ಬಣ ಮುಂದಾಗಿದೆ ಎಂದು ತಿಳಿಸಿದರು.
Advertisement