
ಬೆಂಗಳೂರು: ಕೋಲಾರ ಜಿಲ್ಲೆಯ ಮಾಲೂರು ಕ್ಷೇತ್ರವನ್ನು ಪ್ರತಿನಿಧಿಸುವ ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ ಅವರ ಆಯ್ಕೆಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ಅನೂರ್ಜಿತಗೊಳಿಸಿದೆ. ಅಲ್ಲದೆ, 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಮರುಎಣಿಕೆಗೆ ಆದೇಶಿಸಿದೆ.
ನಂಜೇಗೌಡ ವಿರುದ್ಧ ಸೋತಿದ್ದ ಬಿಜೆಪಿಯ ಕೆಎಸ್ ಮಂಜುನಾಥ್ ಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್ ದೇವದಾಸ್ ನೇತೃತ್ವದ ಪೀಠ ಈ ತೀರ್ಪು ನೀಡಿದೆ.
ಮತ ಎಣಿಕೆ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಸುಮಾರು ಎರಡು ವರ್ಷಗಳ ವಿಚಾರಣೆಯ ನಂತರ, ನ್ಯಾಯಾಲಯವು ಮರುಎಣಿಕೆ ಮಾಡುವಂತೆ ಆದೇಶಿಸಿ, ನಂಜೇಗೌಡ ಅವರ ಆಯ್ಕೆಯನ್ನು ಅಮಾನ್ಯ ಎಂದು ಘೋಷಿಸಿತು.
ಆದಾಗ್ಯೂ, ನಂಜೇಗೌಡ ಅವರ ಪರ ವಕೀಲರ ಮನವಿ ಮೇರೆಗೆ, ಶಾಸಕ ಸ್ಥಾನವನ್ನು ಅಸಿಂಧುಗೊಳಿಸಿದ್ದ ತನ್ನದೇ ಆದೇಶಕ್ಕೆ 30 ದಿನಗಳ ಕಾಲ ಹೈಕೋರ್ಟ್ ತಡೆ ನೀಡಿದೆ. ಈ ಮಧ್ಯಂತರ ಪರಿಹಾರವು ಕಾಂಗ್ರೆಸ್ ಶಾಸಕರಿಗೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತದೆ. ಆ ಅವಧಿಯೊಳಗೆ ಸುಪ್ರೀಂ ಕೋರ್ಟ್‌ನಿಂದ ಯಾವುದೇ ನಿರ್ದೇಶನ ಬಾರದಿದ್ದರೆ, ಶಾಸಕ ಸ್ಥಾನ ಅನೂರ್ಜಿತಗೊಳ್ಳಲಿದೆ. ಮರು ಮತ ಎಣಿಕೆ ನಡೆಯಲಿದೆ.
Advertisement