News Headlines 18-09-25 | Kalaburagi ಆಳಂದ ಕ್ಷೇತ್ರದಲ್ಲಿ 6000 ಮತ ಡಿಲೀಟ್: ರಾಹುಲ್ ಆರೋಪ; ಬಾನು ಮುಷ್ತಾಕ್ ಉದ್ಘಾಟನೆ ವಿವಾದ: ಸುಪ್ರೀಂ ಕೋರ್ಟ್ ಅಂಗಳಕ್ಕೆ; Rape ಯೋಗ ಗುರು ಬಂಧನ!

News Headlines 18-09-25 | Kalaburagi ಆಳಂದ ಕ್ಷೇತ್ರದಲ್ಲಿ 6000 ಮತ ಡಿಲೀಟ್: ರಾಹುಲ್ ಆರೋಪ; ಬಾನು ಮುಷ್ತಾಕ್ ಉದ್ಘಾಟನೆ ವಿವಾದ: ಸುಪ್ರೀಂ ಕೋರ್ಟ್ ಅಂಗಳಕ್ಕೆ; Rape ಯೋಗ ಗುರು ಬಂಧನ!

1. Kalaburagi ಆಳಂದ ಕ್ಷೇತ್ರದಲ್ಲಿ 6000 ಮತ ಡಿಲೀಟ್: ರಾಹುಲ್ ಆರೋಪ

ಲೋಕಸಭೆ ವಿರೋಧ ಪಕ್ಷದ ನಾಯಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಭಾರತ ಚುನಾವಣಾ ಆಯೋಗ ಮೇಲೆ ಮತ ಕಳ್ಳತನದ ಗಂಭೀರ ಆರೋಪ ಮಾಡಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಮತ ಕಳ್ಳರ ರಕ್ಷಕ ಎಂದು ಕಟುವಾಗಿ ಟೀಕಿಸಿದ್ದಾರೆ. ದೆಹಲಿಯ ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕರ್ನಾಟಕದ ಆಳಂದ ಕ್ಷೇತ್ರದಲ್ಲಿ ಸಾಮೂಹಿಕ ಮತ ಅಳಿಸುವಿಕೆ ಅಕ್ರಮ ನಡೆದಿದ್ದು, ಕಾಂಗ್ರೆಸ್ ಮತದಾರರನ್ನೇ ಗುರಿಯಾಗಿಸಿಕೊಳ್ಳಲಾಗಿದೆ. ಈ ಪ್ರಕ್ರಿಯೆಗೆ ಅತ್ಯಾಧುನಿಕ ಕೇಂದ್ರೀಕೃತ ವ್ಯವಸ್ಥೆಯನ್ನು ಬಳಸಲಾಗಿದ್ದು ಮತದಾರರ ಅಳಿಸುವಿಕೆಗೆ ಅರ್ಜಿಗಳನ್ನು ಸ್ವಯಂಚಾಲಿತವಾಗಿ ಸಾಫ್ಟ್‌ವೇರ್ ಬಳಸಲಾಗಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಆಳಂದ ಕ್ಷೇತ್ರದಲ್ಲಿ 6,018 ಮತಗಳನ್ನು ಅಳಿಸಿಹಾಕಲಾಗಿದ್ದು, ಈ ವಿಷಯದ ಬಗ್ಗೆ ತನಿಖೆ ನಡೆಯುತ್ತಿದೆ. ಕರ್ನಾಟಕ ಸಿಐಡಿ ಚುನಾವಣಾ ಆಯೋಗಕ್ಕೆ 18 ತಿಂಗಳಲ್ಲಿ 18 ಪತ್ರಗಳನ್ನು ಕಳುಹಿಸಿದೆ. ತನಿಖೆಗೆ ಬೇಕಾದ ಸರಿಯಾದ ಮಾಹಿತಿ ನೀಡಿಲ್ಲ. ಈ ಆರೋಪಗಳನ್ನು ದೃಢೀಕರಿಸಲು ಸ್ಪಷ್ಟ ಪುರಾವೆಗಳು ನನ್ನ ಬಳಿ ಇವೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. ರಾಹುಲ್ ಗಾಂಧಿ ಆರೋಪಗಳು ಆಧಾರರಹಿತ ಎಂದು ಹೇಳಿರುವ ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ಅವರು, ಯಾವುದೇ ವ್ಯಕ್ತಿ ಆನ್‌ಲೈನ್‌ನಲ್ಲಿ ಯಾವುದೇ ಮತವನ್ನು ಅಳಿಸಲು ಸಾಧ್ಯವಿಲ್ಲ, ಬಾಧಿತ ವ್ಯಕ್ತಿಯ ಒಪ್ಪಿಗೆ ಇಲ್ಲದೆಯೇ ಮತವನ್ನು ಅಳಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದರು.

2. Mysurudasara ಬಾನು ಮುಷ್ತಾಕ್ ಉದ್ಘಾಟನೆ ವಿವಾದ: Supreme Court ಅಂಗಳಕ್ಕೆ

ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರಿಂದ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಜಾಗೊಳಿಸಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ವಕೀಲ ಎಚ್ ಎಸ್ ಗೌರವ್ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ನಾಳೆ ವಿಚಾರಣೆ ನಡೆಸಲು ಸರ್ವೋಚ್ಛ ನ್ಯಾಯಾಲಯ ಒಪ್ಪಿಕೊಂಡಿದೆ. ಸೆಪ್ಟೆಂಬರ್ 22ರಂದು ಕಾರ್ಯಕ್ರಮ ನಡೆಯಲಿರುವುದರಿಂದ ತುರ್ತು ವಿಚಾರಣೆಗಾಗಿ ಅರ್ಜಿದಾರರ ಪರ ವಕೀಲ ಎಚ್ ಎಸ್ ಗೌರವ್ ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ ಅವರ ಪೀಠದ ಮುಂದೆ ಮನವಿ ಮಾಡಿದರು. ಕರ್ನಾಟಕದಲ್ಲಿ ಸೆಪ್ಟೆಂಬರ್ 22ರಂದು ಮೈಸೂರಿನ ಚಾಮುಂಡೇಶ್ವರಿ ಪೂಜೆ ಮಾಡಲು ಹಿಂದೂಯೇತರ ವ್ಯಕ್ತಿಗೆ ಅವಕಾಶ ನೀಡಲಾಗಿದೆ ಎಂದು ವಕೀಲರು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

3. ಧರ್ಮಸ್ಥಳದ ಬಳಿ ಶವಗಳನ್ನು ಹೂತಿರುವ ಪ್ರಕರಣದ ಶೋಧ ತೀವ್ರ

ಧರ್ಮಸ್ಥಳದ ಬಳಿ ಶವಗಳನ್ನು ಹೂತಿರುವ ಪ್ರಕರಣದ ಸಂಬಂಧ ತನಿಖೆಯನ್ನು ತೀವ್ರಗೊಳಿಸಿರುವ ಎಸ್‌ಐಟಿ ಅಧಿಕಾರಿಗಳು ಬಂಗ್ಲೆಗುಡ್ಡದಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ದೊರೆತ 5 ತಲೆಬುರುಡೆ, 113 ಮೂಳೆಗಳನ್ನು ವಿಧಿವಿಜ್ಞಾನ ಪ್ರಯೋಗಾಲಯ ಕಳುಹಿಸಲು ಮುಂದಾಗಿದ್ದಾರೆ. ಬಂಗ್ಲೆಗುಡ್ಡದಲ್ಲಿ ಅನೇಕ ಅಸ್ಥಿಪಂಜರಗಳನ್ನು ನೋಡಿದ್ದೇನೆ ಎಂದು ವಿಠಲ್ ಗೌಡ ಮಾಡಿದ್ದ ಆರೋಪ ಸಂಬಂಧ ಎಸ್‌ಐಟಿ ಶೋಧ ತೀವ್ರಗೊಂಡಿದ್ದು, ಹಲವು ವಸ್ತುಗಳು ಪತ್ತೆಯಾಗಿವೆ. ಶೋಧದ ವೇಳೆ ಒಂದು ಅಸ್ಥಿಪಂಜರದ ಪಕ್ಕದಲ್ಲೇ ಹಿರಿಯ ನಾಗರಿಕರ ಐಡಿ ಕಾರ್ಡ್ ಪತ್ತೆಯಾಗಿದೆ. ಅಲ್ಲದೆ, ಮರದಲ್ಲಿ ಎರಡು ಹಗ್ಗ ಮತ್ತು ಒಂದು ಸೀರೆ ಸಿಕ್ಕಿದ್ದು, ನೇಣುಬಿಗಿದ ಅನುಮಾನ ಮೂಡಿಸಿದೆ.

4. ಉದ್ಯಮಿಗಳು ರಾಜ್ಯ ಬಿಟ್ಟು ಹೋಗುವುದಾದರೆ ಹೋಗಿ; ಬೆದರಿಕೆ ಹಾಕಿದರೇ ಸುಮ್ಮನಿರಲ್ಲ

ಬೆಂಗಳೂರಿನ ಮೂಲಭೂತ ಸೌಲಭ್ಯಗಳ ಬಗ್ಗೆ ಅಸಮಾಧಾನವಿದ್ದರೆ ಕಂಪನಿಗಳು ರಾಜ್ಯವನ್ನು ತೊರೆಯಬಹುದು. ಆದರೆ ಸರ್ಕಾರಕ್ಕೆ ಬೆದರಿಕೆ ಹಾಕಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. 'ನಗರದ ಮೂಲಸೌಕರ್ಯಗಳನ್ನು ಸರಿಪಡಿಸಲು ಸರ್ಕಾರ ಬದ್ಧವಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚಲು ನವೆಂಬರ್ ಗಡುವು ನೀಡಲಾಗಿದೆ. ಬೆಂಗಳೂರಿನ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ಉದ್ಯಮಿಗಳ ಬೆಂಗಳೂರು ತೊರೆಯುವ ಟ್ವೀಟ್ ಕುರಿತು ಮಾತನಾಡಿದ ಡಿಕೆ ಶಿವಕುಮಾರ್, 'ಬೆಂಗಳೂರಿನ ಬಗ್ಗೆ ತೃಪ್ತಿ ಇಲ್ಲವೆಂದು ಹೋಗೋರನ್ನ ತಡೆಯಲ್ಲ. ಆದರೆ, ಸರ್ಕಾರಕ್ಕೆ ಬೆದರಿಸಲು, ಬ್ಯಾಕ್‌ಮೇಲ್‌ ಮಾಡೋಕೆ ಬರಬೇಡಿ. ಕಂಪನಿಗಳು ತಮ್ಮ ಸ್ಥಳವನ್ನು ಬದಲಾಯಿಸುವ ನಿರ್ಧಾರವು ವ್ಯಾಪಾರ ಸಮಸ್ಯೆಗಳ ಕಾರಣದಿಂದಾಗಿರಬಹುದು ಎಂದು ಹೇಳಿದರು.

5. Rape: ಯೋಗ ಗುರು ಬಂಧನ

ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗ ತರಬೇತುದಾರನನ್ನು ಬಂಧಿಸಲಾಗಿದೆ. ರಾಜರಾಜೇಶ್ವರಿ ನಗರದಲ್ಲಿ ಹಲವಾರು ವರ್ಷಗಳಿಂದ ಯೋಗ ಕೇಂದ್ರವನ್ನು ನಡೆಸುತ್ತಿದ್ದ ನಿರಂಜನ ಮೂರ್ತಿ ಬಂಧಿತ ಯೋಗ ಗುರು. ಯೋಗ ತರಗತಿಗಳಿಗೆ ಹಾಜರಾಗಿದ್ದ 17 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 17 ವರ್ಷದ ಬಾಲಕಿ ನೀಡಿದ ದೂರಿನ ಅನ್ವಯ ಪೋಕ್ಸೋ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಾಗಿದ್ದು ತನಿಖೆ ವೇಳೆ ಅತ್ಯಾಚಾರ ಎಸಗಿರುವುದು ದೃಢಪಟ್ಟಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com