
ಹಾಸನ: ಮೊಸಳೆಹೊಸಹಳ್ಳಿ ಗಣೇಶ ವಿಸರ್ಜನೆ ಮರವಣಿಗೆಯಲ್ಲಿ ಭಾಗವಹಿಸಿದ್ದ ಜನರ ಮೇಲೆ ಟ್ರಕ್ ಹರಿದು 10 ಜನರು ಸಾವನ್ನಪ್ಪಿ, 21 ಜನರು ಗಾಯಗೊಂಡ ಪ್ರಕರಣ ಸಂಬಂಧ ಸರ್ಕಾರ ನೀಡಿದ ಭರವಸೆ ಈಡೇರಿಲ್ಲ, ಹೀಗಾಗಿ ಅಪಘಾತದಲ್ಲಿ ಗಾಯಗೊಂಡವರ ಸಂಬಂಧಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಮತ್ತು ಹಾಸನ ಸಂಸದ ಶ್ರೇಯಸ್ ಪಟೇಲ್ ಅವರು ಸಂತ್ರಸ್ತರನ್ನು ಭೇಟಿ ಮಾಡಿ ಗಾಯಾಳುಗಳ ವೈದ್ಯಕೀಯ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಭರವಸೆ ನೀಡಿದ್ದರು.
ಗಾಯಾಳುಗಳಿಗೆ 50,000 ರೂ. ಪರಿಹಾರ ನೀಡುವುದಾಗಿಯೂ ಹೇಳಿದ್ದರು. ಆದರೆ ಅಂದಿನಿಂದ, ರಾಜಕೀಯ ನಾಯಕರು ಅಥವಾ ಹಿರಿಯ ಅಧಿಕಾರಿಗಳು ಅನೇಕ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿಲ್ಲ.
ಗಾಯಾಳುಗಳಲ್ಲಿ ಮೊಸಳೆಹೊಸಹಳ್ಳಿಯ ಎಂಜಿನಿಯರಿಂಗ್ ವಿದ್ಯಾರ್ಥಿ ಹೃತ್ವಿಕ್ ಮತ್ತು ಮೊಸಳೆಹೊಸಹಳ್ಳಿಯ ಸರ್ಕಾರಿ ಡಿಪ್ಲೊಮಾ ಕಾಲೇಜಿನ ಗ್ರೂಪ್ ಡಿ ಉದ್ಯೋಗಿ ಆದರ್ಶ್ ಸೇರಿದ್ದಾರೆ. ಗಂಭೀರವಾಗಿ ಗಾಯಗೊಂಡ ಮತ್ತೊಬ್ಬ ವಿದ್ಯಾರ್ಥಿ ಆಕಾಶ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗೆ ಹಣ ನೀಡುವಂತೆ ಒತ್ತಡ ಹೇರುತ್ತಿರುವುದರಿಂದ ಸಂತ್ರಸ್ತರ ಕುಟುಂಬಗಳು ಈಗ ಅಸಮಾಧಾನಗೊಂಡಿವೆ.
ಭರವಸೆ ನೀಡಿದ ಪರಿಹಾರವನ್ನು ಬಿಡುಗಡೆ ಮಾಡದಿದ್ದಕ್ಕಾಗಿ ಜೆಡಿಎಸ್ ನಾಯಕರು ಸಾಮಾಜಿಕ ಮಾಧ್ಯಮಗಳಲ್ಲಿ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದಾರೆ.
ಗಾಯಾಳುಗಳ ವೈದ್ಯಕೀಯ ವೆಚ್ಚವನ್ನು ಭರಿಸಲು ಜಿಲ್ಲಾ ಸಚಿವರು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್ ನಾಯಕ ನಾಗರಾಜ್ ಒತ್ತಾಯಿಸಿದ್ದಾರೆ. ಸರ್ಕಾರವು ಆಸ್ಪತ್ರೆಯ ಶುಲ್ಕವನ್ನು ಮುಂದಿನ ದಿನಗಳಲ್ಲಿ ಮರುಪಾವತಿಸಲಿದೆ ಎಂದು ನಂತರ ಹಿರಿಯ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
Advertisement