
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಜಾತಿಗಣತಿ ಸಮೀಕ್ಷೆ ಆರಂಭವಾಗಲು ಕೇವಲ ಎರಡು ದಿನಗಳಷ್ಟೇ ಬಾಕಿ ಇದ್ದು, ಈ ನಡುವಲ್ಲೇ ಸಮೀಕ್ಷೆ ಬಗ್ಗೆ ಸಚಿವರಲ್ಲಿಯೇ ಭಿನ್ನಮತ ಸ್ಫೋಟಗೊಂಡಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಬಗ್ಗೆ ಚರ್ಚೆ ನಡೆದಿದಿದ್ದು, ಈ ವೇಳೆ ಸಮೀಕ್ಷಾ ಪಟ್ಟಿಯಲ್ಲಿ 331 ಹೊಸ ಜಾತಿಗಳ ಸೇರ್ಪಡೆಗೊಳಿಸುವುದನ್ನು ಸಚಿವರ ಒಂದು ವರ್ಗ ವಿರೋಧ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.
ಕೆಲ ಸಚಿವರು ಸಮೀಕ್ಷೆ ಪರ ವಾದಿಸಿದ್ದರೆ. ಇನ್ನೂ ಕೆಲವರು ಸಮೀಕ್ಷೆಯ ವಿರೋಧಿಸಿದ್ದು, ಸಂಪುಟ ಸಭೆಯಲ್ಲಿ ಪರ-ವಿರೋಧದ ಚರ್ಚೆ ತಾರಕಕ್ಕೇರಿ ವಾಗ್ಯುದ್ದ ನಡೆಯಿತು ಎನ್ನಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖವೇ ಕೆಲ ಸಚಿವರು ಸಮೀಕ್ಷೆ ವಿರುದ್ಧ ಭಾವೋದ್ವೇಗದಲ್ಲಿ ಮಾತನಾಡಿದ್ದಲ್ಲದೆ ಸಮೀಕ್ಷೆಯನ್ನೇ ನಡೆಸದಂತೆ ಆಗ್ರಹಿಸಿದರು ಎಂದು ಮೂಲಗಳಿಂದ ತಿಳಿದುಬಂದಿದೆ.
ಸಮೀಕ್ಷೆ ಕುರಿತು ಎಲ್ಲಾ ಜಾತಿಗಳಲ್ಲೂ ತೀವ್ರ ಗೊಂದಲವಿದೆ. ರಾಜ್ಯದ ಜಾತಿ ಪಟ್ಟಿ ಯಲ್ಲಿ ಇಲ್ಲದ ಲಿಂಗಾಯತ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್ ಎಂದೆಲ್ಲ 331 ಹೊಸ ಜಾತಿಗಳನ್ನು ಸೇರ್ಪಡೆ ಮಾಡಿದೆ. ಜತೆಗೆ ಲಿಂಗಾಯತರಲ್ಲಿ ಯಾವ ಧರ್ಮ ನಮೂದಿಸಬೇಕು ಎಂಬ ಗೊಂದಲ ಉಂಟಾಗಿದ್ದು, ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಈ ಗೊಂದಲ ಬಗೆಹರಿಸುವವರೆಗೂ ಸಮೀಕೆಗೆ ಮುಂದಾಗಬಾರದು.
ಒಂದೊಮ್ಮೆ ಮುಂದಾದರೆ ಮತ್ತೊಮ್ಮೆ ಜಾತಿ ಸಮೀಕ್ಷೆ ಕಾಂಗ್ರೆಸ್‌ಗೆ ಕಂಟಕವಾಗ ಲಿದೆ ಎಂದು ಎಚ್ಚರಿಸಿದರು ಎನ್ನಲಾಗಿದೆ. ಆದಾಗ್ಯೂ ಕೆಲ ಸಚಿಚವರು ಸಮೀಕ್ಷೆಯನ್ನು ಮುಂದುವರೆಸುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು ಎಂದು ತಿಳಿದುಬಂದಿದೆ.
ಏತನ್ಮಧ್ಯೆ, ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ಮುಖ್ಯಮಂತ್ರಿಗಳ ಪರ ವಾದಿಸಿದ್ದು, ಕಾಂಗ್ರೆಸ್ ಅಥವಾ ಸರ್ಕಾರ ಸಮಾಜವನ್ನು ವಿಭಜಿಸುವುದಿಲ್ಲ. ಜಾತಿ ಸಮೀಕ್ಷೆಯ ಉದ್ದೇಶ ನಾಗರೀಕರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ನಿರ್ಣಯಿಸುವುದು ಮಾತ್ರ. ಬಿಜೆಪಿ ದಾರಿ ತಪ್ಪಿಸುತ್ತಿದೆ. ಸರ್ಕಾರ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ನೀಡಿದೆ. ಕೆಲವರು ಪ್ರತ್ಯೇಕ ಗುರುತು ಬೇಕು ಎಂದು ಹೇಳಿದರೆ, ಇತರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜಕೀಯ ಉದ್ದೇಶದಿಂದ ಮಾತನಾಡುವವರನ್ನು ನಾವು ಪರಿಗಣಿಸುವುದಿಲ್ಲ ಎಂದು ಹೇಳಿದರು ತಿಳಿದುಬಂದಿದೆ.
ಈ ವೇಳೆ ಸದಸ್ಯರು ವ್ಯಕ್ತಪಡಿಸಿದ ಅಭಿಪ್ರಾಯಗಳಿಂದ ಅಸಮಾಧಾನಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನನಗೆ ಮೇಲ್ವರ್ಗಗಳ ವಿರುದ್ಧ ಎಂಬ ಹಣೆಪಟ್ಟಿ ಕಟ್ಟುತ್ತಿದ್ದೀರಾ? ಎಂದು ಗರಂ ಆದ ಪ್ರಸಂಗವೂ ನಡೆದಿರುವುದಾಗಿ ತಿಳಿದುಬಂದಿದೆ.
ಎಲ್ಲಾ ಜಾತಿಗಳ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಅರಿಯಲು ಸಮೀಕ್ಷೆಗೆ ನಿರ್ಧರಿಸಲಾಗಿದೆ. ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ನಾನು ಕೇವಲ ಎಸ್ಸಿ,ಎಸ್ಟಿ, ಓಬಿಸಿ, ಅಲ್ಪಸಂಖ್ಯಾತರ ಎಂಬ ಹಣೆಪಟ್ಟಿ ಕಟ್ಟಿದಂತಿದೆ. ಶೋಷಿತರ ಪರ. ಮೇಲ್ವರ್ಗ ಸೇರಿ ಎಲ್ಲಾ ಜಾತಿಗಳಲ್ಲಿನ ಬಡವರನ್ನೂ ಗುರುತಿಸಿ ನ್ಯಾಯ ಒದಗಿಸಬೇಕಾಗಿದೆ. ಇದನ್ನು ಹೇಗೆ ಮಾಡಬೇಕೆಂಬ ಬಗ್ಗೆ ಪುನರ್ ಪರಿಶೀಲನೆ ನಡೆಸಿ ವರದಿ ನೀಡಿ ಎಂದು ಹಿರಿಯ ಸಚಿವರಿಗೆ ಸೂಚನೆ ನೀಡಿದರು ಎಂದು ತಿಳಿದುಬಂದಿದೆ.
ಸಚಿವ ಸಂಪುಟ ಸಭೆಯ ನಂತರ, ಎಂಬಿ ಪಾಟೀಲ್, ಈಶ್ವರ್ ಖಂಡ್ರೆ, ಎಚ್‌ಸಿ ಮಹದೇವಪ್ಪ, ಕೆಎಚ್ ಮುನಿಯಪ್ಪ ಮತ್ತು ಬೈರತಿ ಸುರೇಶ್ ಸೇರಿದಂತೆ ಆರು ಸಚಿವರು ಮತ್ತೊಂದು ಸುತ್ತಿನ ಸಭೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.
Advertisement