
ಮಾಜಿ ಸಚಿವ ಮತ್ತು ಚಿಕ್ಕಬಳ್ಳಾಪುರದ ಬಿಜೆಪಿ (BJP) ಸಂಸದ ಡಾ. ಕೆ. ಸುಧಾಕರ್ ಅವರ ಪತ್ನಿ ಡಾ. ಪ್ರೀತಿ ಸುಧಾಕರ್ ಅವರು ಸೈಬರ್ ವಂಚನೆಗೆ ಬಲಿಯಾಗಿದ್ದಾರೆ. ಮುಂಬೈ ಸೈಬರ್ ಇಲಾಖೆಯ ಅಧಿಕಾರಿಗಳೆಂದು ಹೇಳಿಕೊಂಡು ವಂಚಕರು ಅವರನ್ನು ಡಿಜಿಟಲ್ ಬಂಧನದ ಮೂಲಕ 14 ಲಕ್ಷ ರೂಪಾಯಿ ವಂಚಿಸಿದ್ದಾರೆ.
ಆರೋಪಿಗಳು ವೀಡಿಯೊ ಕರೆಯ ಮೂಲಕ ಪ್ರೀತಿ ಸುಧಾಕರ್ ಅವರಿಗೆ ಬೆದರಿಕೆ ಹಾಕಿದ್ದಾರೆ. ಅವರ ದಾಖಲೆಗಳನ್ನು ವಿದೇಶಗಳಲ್ಲಿ ಅಕ್ರಮ ವಹಿವಾಟುಗಳಿಗೆ ಬಳಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ವಂಚನೆಯ ನಂತರ, ಆರೋಪಿಗಳು ಹಣವನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದರು. ಆದರೆ ಹಣವನ್ನು ಪಡೆದ ನಂತರ ನಾಪತ್ತೆಯಾಗಿದ್ದರು.
ಆಗಸ್ಟ್ 26ರಂದು ವಂಚಕರು ಡಾ. ಪ್ರೀತಿ ಸುಧಾಕರ್ ಅವರೊಂದಿಗೆ ವೀಡಿಯೊ ಕರೆಯ ಮೂಲಕ ಮಾತನಾಡಿ ಬೆದರಿಕೆ ಹಾಕಿದ್ದು ಆರ್‌ಬಿಐ ನಿಯಮಗಳ ಪ್ರಕಾರ 45 ನಿಮಿಷಗಳಲ್ಲಿ ಹಣವನ್ನು ಹಿಂದಿರುಗಿಸುವುದಾಗಿ ಅವರು ಭರವಸೆ ನೀಡಿದರು. ಆದರೆ ಹಣವನ್ನು ಪಡೆದು ವಂಚಿಸಿದ್ದಾರೆ.
ಡಾ. ಪ್ರೀತಿ ಸುಧಾಕರ್ ಅವರ ದೂರಿನ ನಂತರ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪೊಲೀಸರು ತಕ್ಷಣ ಕ್ರಮ ಕೈಗೊಂಡು ವಂಚನೆಗೊಳಗಾದ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿದ್ದಾರೆ. ಗೋಲ್ಡನ್ ಅವರ್ನಲ್ಲಿ ದೂರು ನೀಡಿದ್ದರಿಂದ 14 ಲಕ್ಷ ರೂ ಹಣ ಕೂಡ ವಾಪಸ್ ಬಂದಿದೆ. ಸದ್ಯ ಸೈಬರ್ ವಂಚಕರ ಜಾಲ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಆದರೆ ಇಲ್ಲಿಯವರೆಗೂ ಯಾರನ್ನೂ ಬಂಧಿಸಲಾಗಿಲ್ಲ.
Advertisement