
ಮೈಸೂರು: ಯುವ ಪ್ರತಿಭೆಗಳನ್ನು ಬೆಂಬಲಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಸರ್ಕಾರಿ ಉದ್ಯೋಗಗಳಲ್ಲಿ ಕ್ರೀಡಾಪಟುಗಳಿಗೆ ಶೇ.3ರಷ್ಟು ಮೀಸಲಾತಿ ನೀಡುವ ನೀತಿಯನ್ನು ಜಾರಿಗೆ ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದರು.
ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿದ ನಂತರ ಮಾತನಾಡಿದ ಸಿಎಂ, ರಾಜ್ಯ ಸರ್ಕಾರ ಪೊಲೀಸ್ ಮತ್ತು ಇತರ ಸರ್ಕಾರಿ ಇಲಾಖೆಗಳಲ್ಲಿ ಕ್ರೀಡಾ ಕೋಟಾವನ್ನು ಒದಗಿಸಿದೆ. 6 ಕೋಟಿ ರೂ. ಖರ್ಚು ಮಾಡಿ 60 ಯುವ ಪ್ರತಿಭೆಗಳಿಗೆ ತರಬೇತಿ ನೀಡುತ್ತಿದೆ. 2028 ರಲ್ಲಿ ಕರ್ನಾಟಕದ ಒಲಿಂಪಿಕ್ ಪದಕ ವಿಜೇತರಿಗೆ 6 ಕೋಟಿ ರೂ. ನಗದು ಬಹುಮಾನವನ್ನು ಘೋಷಿಸಿದೆ. ವಿಸ್ತೃತ ಕೆಲಸಗಳಿಗಾಗಿ ಮತ್ತು ಚಾಮುಂಡಿ ವಿಹಾರ ಕ್ರೀಡಾಂಗಣದ ಅಭಿವೃದ್ಧಿಗಾಗಿ ಸರ್ಕಾರ 20 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ಹೇಳಿದರು.
ರಾಜ್ಯಾದ್ಯಂತ ಸುಮಾರು 3,600 ಜನರು ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ, ಇದು ಕ್ರೀಡಾ ಮನೋಭಾವವನ್ನು ಹೆಚ್ಚಿಸುತ್ತದೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಕೊಡುಗೆ ನೀಡುತ್ತದೆ ಎಂದು ತಿಳಿಸಿದರು.
ಇದೇ ವೇಳೆ ವಿದ್ಯಾರ್ಥಿಗಳು ಅಧ್ಯಯನ ಮತ್ತು ಕ್ರೀಡಾಕೂಟಗಳತ್ತ ಗಮನಹರಿಸುವಂತೆ ಮುಖ್ಯಮಂತ್ರಿಗಳು ಸಲಹೆ ನೀಡಿದರು.
ಬಳಿಕ ಕುಸ್ತಿಪಟು ವಿಘ್ನೇಶ್ ಫೋಗಟ್ ಅವರ ಕೊಡುಗೆಗಳನ್ನು ಶ್ಲಾಘಿಸಿದ ಸಿಎಂ, ದೇಶಕ್ಕಾಗಿ ಅನೇಕ ಮಹಿಳೆಯರು ಪದಕಗಳನ್ನು ಗೆದ್ದಿರುವುದರಿಂದ ಕುಸ್ತಿ ಇನ್ನು ಮುಂದೆ ಪುರುಷ ಪ್ರಧಾನ ಕ್ರೀಡೆಯಾಗಿ ಉಳಿದಿಲ್ಲ ಎಂದರು. ಇದೇ ವೇಳೆ ವಿಘ್ನೇಶ್ ಫೋಗಟ್ ಅವರನ್ನು ಸನ್ಮಾನಿಸಿದರು.
ಈ ಸಂದರ್ಭಧಲ್ಲಿ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜು, ಸಚಿವ ಕೆ. ವೆಂಕಟೇಶ್, ಶಾಸಕರಾದ ತನ್ವೀರ್ ಸೇಠ್, ರವಿಶಂಕರ್, ಅನಿಲ್ ಚಿಕ್ಕಮಾದು, ತಿಮ್ಮಯ್ಯ, ಸಂಸದ ಸುನಿಲ್ ಬೋಸ್ ಮತ್ತು ಇತರರು ಉಪಸ್ಥಿತರಿದ್ದರು.
Advertisement