
ಬೆಂಗಳೂರು: ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳದ ಅಧಿಕಾರಿಗಳು, ದೂರುದಾರ ಹಾಗೂ ಸಾಕ್ಷಿದಾರ ಚಿನ್ನಯ್ಯನಿಗೆ ಹಣಕಾಸು ನೆರವು ನೀಡಿದ್ದು ಯಾರು ಎಂಬುದರ ಕುರಿತು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ದೂರುದಾರ ಚಿನ್ನಯ್ಯನಿಗೆ ಹಣ ವರ್ಗಾವಣೆ ಮಾಡಿರುವ 11 ಜನರಿಗೆ ನೋಟಿಸ್ ನೀಡಲಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಚಿನ್ನಯ್ಯನ ಖಾತೆಗೆ ಹಣವನ್ನು ವರ್ಗಾಯಿಸಿದ ಆರು ಜನರನ್ನು ಈಗಾಗಲೇ ಪ್ರಶ್ನಿಸಿದ್ದೇವೆ. ಅವರಲ್ಲಿ ಕೆಲವರು ಮಹೇಶ್ ಶೆಟ್ಟಿ ತಿಮರೋಡಿ ಅವರ ಬೆಂಬಲಿಗರಾಗಿದ್ದಾರೆ. ಚಿನ್ನಯ್ಯನ ಖಾತೆಗೆ ಸುಮಾರು 3.5 ಲಕ್ಷ ರೂ.ಗಳನ್ನು ಹಾಕಲಾಗಿದೆ. ಗಿರೀಶ್ ಮಟ್ಟಣ್ಣವರ್ ಅವರ ಪತ್ನಿಯ ಖಾತೆಯಿಂದಲೂ ಸುಮಾರು ಆರು ತಿಂಗಳ ಹಿಂದೆ ಚಿನ್ನಯ್ಯನ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂದು ಹೆಸರು ಬಹಿರಂಗಪಡಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಏತನ್ಮಧ್ಯೆ ಏಳು ತಲೆಬುರುಡೆಗಳು ಮತ್ತು ಅಸ್ಥಿಪಂಜರಗಳನ್ನು ವಶಪಡಿಸಿಕೊಂಡಿರುವ ಕುರಿತು ಅಸ್ವಾಭಾವಿಕ ಮರಣ ವರದಿ ಪ್ರಕರಣಗಳನ್ನು ದಾಖಲಿಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಮ್ಯಾಜಿಸ್ಟ್ರೇಟ್ ಅನುಮತಿಯನ್ನು ಕೋರಲಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ, ನೆರೆಯ ಕೇರಳ, ತೆಲಂಗಾಣ ಮತ್ತು ಇತರ ದಕ್ಷಿಣ ರಾಜ್ಯಗಳಲ್ಲಿ ಅಪರಾಧ ದಾಖಲೆ ಬ್ಯೂರೋದಲ್ಲಿ ದಾಖಲಾಗಿರುವ ನಾಪತ್ತೆ ದೂರುಗಳ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. ಪತ್ತೆಯಾಗಿರುವ ಅವಶೇಷಗಳ ಕುರಿತು ವಿಧಿವಿಜ್ಞಾನ ವೈದ್ಯರ ಮಾಹಿತಿಯ ಆಧಾರದ ಮೇಲೆ, ಅದನ್ನು ಕಾಣೆಯಾದ ಪ್ರಕರಣಗಳೊಂದಿಗೆ ಹೋಲಿಸುತ್ತೇವೆಂದು ಮಾಹಿತಿ ನೀಡಿದ್ದಾರೆ.
ಇನ್ನು ಸುಳ್ಳು ಸಾಕ್ಷ್ಯ ನುಡಿದ ಆರೋಪದ ಮೇಲೆ ಶಿವಮೊಗ್ಗದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚಿನ್ನಯ್ಯ ಮಂಗಳವಾರ ಬೆಳ್ತಂಗಡಿ ನ್ಯಾಯಾಲಯದ ಮುಂದೆ ಸೆಕ್ಷನ್ 183 ಅಡಿಯಲ್ಲಿ ಹೇಳಿಕೆಯನ್ನು ದಾಖಲಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಎಸ್‌ಐಟಿ ಶೋಧದ ಸಮಯದಲ್ಲಿ ಮನೆಯಲ್ಲಿ ಬಂದೂಕು ಮತ್ತು ಶಸ್ತ್ರಾಸ್ತ್ರಗಳು ಪತ್ತೆಯಾದ ನಂತರ ತಿಮರೋಡಿ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ತಿಮರೋಡಿ ಇನ್ನೂ ವಿಚಾರಣೆಗೆ ಹಾಜರಾಗಿಲ್ಲ ಎಂದು ತಿಳಿದುಬಂದಿದೆ.
ಏತನ್ಮಧ್ಯೆ, ತಿಮರೋಡಿ ಪರ ಕಾನೂನು ವಕೀಲರು ಜಾಮೀನು ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ.
Advertisement