
ಮೈಸೂರು: ಈ ವರ್ಷದ ಮೈಸೂರು ದಸರಾ ಉದ್ಘಾಟಿಸಲು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್ ಅವರಿಗೆ ಆಹ್ವಾನ ನೀಡಿದ ವಿಚಾರ ವಿವಾದಕ್ಕೆ ಕಾರಣವಾಗಿತ್ತು. ಇದರ ಹೊರತಾಗಿಯೂ ಬಾನು ಮುಷ್ತಾಕ್ ಅವರ ಪುಸ್ತಕಗಳು ದಸರಾ ಪುಸ್ತಕ ಮೇಳದಲ್ಲಿ ಹೆಚ್ಚು ಮಾರಾಟವಾಗಿವೆ.
ಮೈಸೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯುತ್ತಿದ್ದು, ಸ್ಟಾಲ್‌ಗಳಿಗೆ ಭೇಟಿ ನೀಡಿದ ಸಾಹಿತ್ಯಾಸಕ್ತರು, ಪುಸ್ತಕ ಪ್ರೇಮಿಗಳು ಬಾನು ಮುಷ್ತಾಕ್ ಅವರು ಬರೆದಿರುವ ಪುಸ್ತಕಗಳನ್ನು ಹುಡುಕುತ್ತಿದ್ದದ್ದು ಕಂಡು ಬಂದಿತು.
2024 ರಲ್ಲಿ ಪ್ರಕಟವಾದ ಮತ್ತು ದೀಪಾ ಭಸ್ತಿ ಅವರು ಅನುವಾದಿಸಿದ ಬಾನು ಮುಷ್ತಾಕ್ ಅವರ 'ಎದೆಯ ಹಣತೆ' ಪುಸ್ತಕ 2025 ರಲ್ಲಿ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ನಡುವೆ ದಸರಾ ಉದ್ಘಾಟನೆಗೆ ಬಾನು ಅವರನ್ನು ಅಹ್ವಾನಿಸಿದ್ದು, ವಿವಾದ-ಪ್ರತಿಭಟನೆಗಳಿಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಪುಸ್ತಕ ಮೇಳದಲ್ಲಿ ಬಾನು ಮುಷ್ತಾಕ್ ಅವರು ಬರೆದಿರುವ ಪುಸ್ತಕಗಳು ಜನರ ಗಮನ ಸೆಳೆಯುತ್ತಿವೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ದಸರಾ ಮಹೋತ್ಸವ ಸಮಿತಿ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರವು ಆಯೋಜಿಸಿರುವ ಈ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಪೂರ್ಣಚಂದ್ರ ತೇಜಸ್ವಿ ಮತ್ತು ಕುವೆಂಪು ಅವರ ಕೃತಿಗಳೊಂದಿಗೆ ಬಾನು ಮುಷ್ತಾಕ್ ಅವರ ಪುಸ್ತಕಗಳೂ ಕೂಡ ಹೆಚ್ಚಾಗಿ ಮಾರಾಟವಾಗುತ್ತಿವೆ ಎಂದು ತಿಳಿದುಬಂದಿದೆ.
ಎದೆಯ ಹಣತೆ ಮತ್ತು ಅದರ ಇಂಗ್ಲಿಷ್ ಆವೃತ್ತಿಯಾದ ಹಾರ್ಟ್ ಲ್ಯಾಂಪ್ ಪುಸ್ತಕ ಮೇಳದಲ್ಲಿ ಹೆಚ್ಚಾಗಿ ಮಾರಾಟವಾಗುತ್ತಿರುವುದಾಗಿ ತಿಳಿದುಬಂದಿದೆ.
ಬಾನು ಮುಷ್ತಾಕ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕಕ್ಕೆ ಪ್ರಶಸ್ತಿಗಳನ್ನು ತಂದಿದ್ದಾರೆ. ಕನ್ನಡ ಬರಹಗಾರರೊಬ್ಬರು ಇಂತಹ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದಿದ್ದಾರೆಂಬುದು ನಮಗೆ ಸಂತೋಷ ತಂದಿದೆ ಎಂದು ಚಾಮರಾಜಪೇಟೆಯ ಕದಂಬ ಪ್ರಕಾಶನದ ಸಿಬ್ಬಂದಿ ಪ್ರಸನ್ನ ಅವರು ಹೇಳಿದ್ದಾರೆ,
ಅನೇಕ ಸಂದರ್ಶಕರು ಬಾನು ಮುಷ್ತಾಕ್ ಅವರ ಪುಸ್ತಕಗಳ ಬಗ್ಗೆ ವಿಚಾರಿಸುತ್ತಿದ್ದಾರೆ. ನಾನು ಈಗಾಗಲೇ ಎದೆಯ ಹಣತೆಯ ನಾಲ್ಕು ಪ್ರತಿಗಳನ್ನು ಮಾರಾಟ ಮಾಡಿದ್ದೇನೆಂದು ತಿಳಿಸಿದ್ದಾರೆ.
ಈ ನಡುವೆ ಪುಸ್ತಕ ಮೇಳದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ಬಿ ಶಿವಾನಂದ ಅವರ 'ಬೂಕರ್ ಬಾನು - ಬಾನು ಮುಷ್ತಾಕ್ ಬದುಕು ಬರಹ' ಕೃತಿಯನ್ನು ಬಿಡುಗಡೆ ಮಾಡಿತು.
Advertisement