

ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸುತ್ತಿರುವ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ(ಜಾತಿ ಗಣತಿ)ಗೆ ತಡೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಹೈಕೋರ್ಟ್ ಬುಧವಾರ ವಿಚಾರಣೆ ನಡೆಸಿತು.
ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರನ್ನೊಳಗೊಂಡ ವಿಭಾಗೀಯ ಪೀಠ, ವಿವರವಾದ ವಾದಗಳನ್ನು ಆಲಿಸಿತು. ಆದರೆ ಯಾವುದೇ ಮಧ್ಯಂತರ ತಡೆ ನೀಡದೆ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.
ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಈ ಅರ್ಜಿಗಳು ಯಾವುದೇ ಸಾಂವಿಧಾನಿಕ ನಿಬಂಧನೆಗಳನ್ನು ಅಥವಾ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕಾಯ್ದೆ, 1995 ರ ನಿರ್ದಿಷ್ಟ ವಿಭಾಗಗಳನ್ನು ಗುರಿಯಾಗಿಸಿಕೊಂಡಿಲ್ಲ. ಆದರೆ ವಾಸ್ತವವಾಗಿ ಸರ್ಕಾರ ಅಧಿಕಾರ ಚಲಾಯಿಸುವುದನ್ನು ತಡೆಯಲು ಪ್ರಯತ್ನಿಸುತ್ತಿವೆ ಎಂದು ಹೇಳಿದರು.
ಅರ್ಜಿದಾರರು ಎತ್ತಿರುವ ಆಕ್ಷೇಪಣೆಗಳು, ಸಮೀಕ್ಷೆಯು "ಅವೈಜ್ಞಾನಿಕ" ಎಂಬ ಸಾಮಾನ್ಯ ಆರೋಪಗಳಾಗಿವೆ. ಸಮೀಕ್ಷೆಯ ವರದಿಯನ್ನು ಸಾರ್ವಜನಿಕಗೊಳಿಸಿದ ನಂತರ ಮಾತ್ರ ಇದನ್ನು ಪರಿಶೀಲಿಸಬಹುದು ಎಂದು ಅವರು ಸಮರ್ಥಿಸಿಕೊಂಡರು.
ರಾಜ್ಯ ಸರ್ಕಾರಗಳು ಕಲ್ಯಾಣ ಯೋಜನೆಗಳಿಗೆ ದತ್ತಾಂಶ ಸಂಗ್ರಹಿಸುವ ಅಧಿಕಾರ ಹೊಂದಿವೆ ಎಂದು ಪ್ರತಿಪಾದಿಸಲು ಸುಪ್ರೀಂ ಕೋರ್ಟ್‌ನ ಪುಟ್ಟಸ್ವಾಮಿ ತೀರ್ಪನ್ನು ಸಹ ಸಿಂಘ್ವಿ ಉಲ್ಲೇಖಿಸಿದರು. ಆ ಮಾಹಿತಿಯನ್ನು ಖಾಸಗಿ ಸಂಸ್ಥೆಗಳೊಂದಿಗೆ ಹಂಚಿಕೊಂಡರೆ ಮಾತ್ರ "ಹಕ್ಕಿನ ಉಲ್ಲಂಘನೆ"ಯಾಗುತ್ತದೆ ಎಂದು ಒತ್ತಿ ಹೇಳಿದರು.
ಅರ್ಜಿದಾರರು ಸಮೀಕ್ಷೆಗಳನ್ನು ನಡೆಸುವ ಸರ್ಕಾರದ ಅಧಿಕಾರವನ್ನು ಪ್ರಶ್ನಿಸುತ್ತಿಲ್ಲ. ಆದರೆ ಜಾತಿಗಳ ಸಂಖ್ಯೆಯಲ್ಲಿನ ಹಠಾತ್ ಹೆಚ್ಚಳ ಮತ್ತು ಆಪಾದಿತ ರಾಜಕೀಯ ಉದ್ದೇಶಗಳನ್ನು ಉಲ್ಲೇಖಿಸಿ ಕಾರ್ಯಗತಗೊಳಿಸುವ ವಿಧಾನವನ್ನು ಪ್ರಶ್ನಿಸಿದ್ದಾರೆ ಎಂದು ಪೀಠ ಸ್ಪಷ್ಟಪಡಿಸಿತು.
ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್, ಸಾಂವಿಧಾನಿಕ ಚೌಕಟ್ಟಿನಲ್ಲಿ ಕೇಂದ್ರ ಸರ್ಕಾರ 2027ರಲ್ಲಿ ಜನಗಣತಿ ಆರಂಭಿಸಲಿದೆ. ಜನಗಣತಿ ಜೊತೆಗೆ ಜಾತಿ ಗಣತಿಯನ್ನು ನಡೆಸಲಾಗುವುದು ಮತ್ತು ಇದು ಮಾತ್ರ ಜನಸಂಖ್ಯಾ ದತ್ತಾಂಶದ ಅಧಿಕೃತ ಮೂಲವೆಂದು ಪರಿಗಣಿಸಲಾಗುತ್ತದೆ ಎಂದು ವಾದಿಸಿದರು.
ಕರ್ನಾಟಕ ಸರ್ಕಾರದ ಪ್ರಯತ್ನ "ಸಮೀಕ್ಷೆಯ ವೇಷ ಧರಿಸಿದ ಜನಗಣತಿ" ಎಂದು ಕಾಮತ್ ವಿವರಿಸಿದರು. ವಾದ, ಪ್ರತಿವಾದ ಆಲಿಸಿದ ಹೈಕೋರ್ಟ್, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
Advertisement