ಪದ್ಮಭೂಷಣ ಪುರಸ್ಕೃತ, ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಎಸ್‌ಎಲ್ ಭೈರಪ್ಪ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 94 ವರ್ಷದ ಭೈರಪ್ಪನವರು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಂದು ಮಧ್ಯಾಹ್ನ 2.38ಕ್ಕೆ ಹೃದಯಸ್ತಂಭನದಿಂದ ಕೊನೆಯುಸಿರೆಳೆದಿದ್ದಾರೆ. ಭೈರಪ್ಪನವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ ಮುಖಂಡರು, ಸಾಹಿತಿಗಳು, ಸಿನಿಮಾ ತಾರೆಯರು ಸಂತಾಪ ಸೂಚಿಸಿದ್ದಾರೆ. ಎಸ್ಎಲ್ ಭೈರಪ್ಪ ದೇಶದ ಆತ್ಮಸಾಕ್ಷಿಯನ್ನು ಕದಲಿಸಿದ ಮತ್ತು ಭಾರತದ ಆತ್ಮವನ್ನು ಆಳವಾಗಿ ಅಧ್ಯಯನ ಮಾಡಿದ ಅತ್ಯುನ್ನತ ಸಾಹಿತಿ ಎಂದು ಬಣ್ಣಿಸಿದ್ದಾರೆ. ಎಸ್.ಎಲ್ ಭೈರಪ್ಪನವರ ನಿಧನವಾರ್ತೆ ನೋವು ತಂದಿದೆ. ಭೈರಪ್ಪನವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ನಾಳೆ ಬೆಳಿಗ್ಗೆ 8 ಗಂಟೆಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇರಿಸಲಾಗುತ್ತದೆ. 2 ಗಂಟೆ ನಂತರ ಪಾರ್ಥವ ಶರೀರವನ್ನು ಮೈಸೂರಿಗೆ ಸಾಗಿಸಲಾಗುತ್ತದೆ. ಇನ್ನು ಸೆ. 26ರಂದು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಲಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನಕಲಿ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿ, ಅಂಗವಿಕಲ ಕೋಟಾದ ಮೀಸಲಾತಿ ಅಡಿ ಸರ್ಕಾರಿ ವೈದ್ಯಕೀಯ ಸೀಟು ಪಡೆಯಲು 21 ವಿದ್ಯಾರ್ಥಿಗಳಿಗೆ ನಕಲಿ ಪ್ರಮಾಣಪತ್ರಗಳನ್ನು ಸೃಷ್ಟಿಸಿದ ಆರೋಪ ಮೇಲೆ ಇಬ್ಬರು ಸರ್ಕಾರಿ ವೈದ್ಯರು ಸೇರಿ ಐವರನ್ನು ಮಲ್ಲೇಶ್ವರಂ ಪೊಲೀಸರ ಬಂಧಿಸಿದ್ದಾರೆ. ಆರೋಪಿಗಳನ್ನು ಶಿಕ್ಷಕ ಭರ್ಮಪ್ಪ ಕೆಬಿ, ಕೊಪ್ಪಳ ಮೂಲದ ಡಿಜೆ ಸುಧಾಕರ್, ಹೊಸಪೇಟೆಯ ಎಫ್‌ಡಿಎ ಉಮೇಶ್ ನಾಗಪ್ಪ ಚೌಧರಿ, ಆಡಳಿತ ವೈದ್ಯಾಧಿಕಾರಿ ಡಾ. ಹರಿಪ್ರಸಾದ್ ಮತ್ತು ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಆರೋಪಿಗಳು ಪ್ರಮಾಣಪತ್ರಗಳನ್ನು ನೀಡಲು ಅವರು ಪ್ರತಿ ಅಭ್ಯರ್ಥಿಗೆ 5-10 ಲಕ್ಷ ರೂ. ಶುಲ್ಕ ವಿಧಿಸಿದ್ದಾರೆಂದು ತಿಳಿದುಬಂದಿದೆ. ಈ ಸಂಬಂಧ ಕೆಇಎ ಆಡಳಿತ ಅಧಿಕಾರಿಯೊಬ್ಬರು ಸೆಪ್ಟೆಂಬರ್ 8 ರಂದು 21 ವಿದ್ಯಾರ್ಥಿಗಳು ಸೇರಿದಂತೆ 24 ಜನರ ವಿರುದ್ಧ ದೂರು ದಾಖಲಿಸಿದ್ದರು.
ಐಟಿ ಸಿಟಿ ಬೆಂಗಳೂರಿನ ಬಹುತೇಕ ರಸ್ತೆಗಳು ಹೊಂಡ ಗುಂಡಿ ಬಿದ್ದು ತೀವ್ರ ಹದಗೆಟ್ಟು ಹೋಗಿದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ವಿರೋಧ ಪಕ್ಷ ಬಿಜೆಪಿ ಇಂದು ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ರಸ್ತೆಗಳ ದುಃಸ್ಥಿತಿ ಮತ್ತು ಗುಂಡಿಗಳ ಹಾವಳಿಯ ಕುರಿತು ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿತು. ಬೆಂಗಳೂರಿನಲ್ಲಿ ಬಿಜೆಪಿ ನಾಯಕರು ಗುಂಡಿಗಳನ್ನು ಮುಚ್ಚುವ ಮೂಲಕ ಪ್ರತಿಭಟನೆ ನಡೆಸಿದರೆ, ರಾಜ್ಯದ ಇತರ ಭಾಗಗಳಲ್ಲಿ 'ರಸ್ತೆ ತಡೆ' ಪ್ರತಿಭಟನೆಗಳು ಮಾಡಿದ್ದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಪ್ರತಿಭಟನೆಗಳಿಗೆ ತಿರುಗೇಟು ನೀಡಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಬೆಂಗಳೂರಿನ ಹದಗೆಟ್ಟ ರಸ್ತೆಗುಂಡಿಗಳಿಗೆ ಹಿಂದಿನ ಬಿಜೆಪಿ ಸರ್ಕಾರವೇ ಕಾರಣ ಎಂದು ಹೇಳಿದ್ದಾರೆ. ಬೆಂಗಳೂರಿನಾದ್ಯಂತ ಪ್ರತಿದಿನ ಸುಮಾರು 1,000 ಗುಂಡಿಗಳನ್ನು ಸಂಘಟಿತ ಪ್ರಯತ್ನಗಳ ಮೂಲಕ ಮುಚ್ಚಲಾಗುತ್ತಿದೆ. ಆದರೆ ಬಿಜೆಪಿ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.
ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣವನ್ನೂ ಮೀರಿಸುವಂತ Sex Scandal ಪ್ರಕರಣವೊಂದು ಬೆಂಗಳೂರಿನಲ್ಲಿ ವರದಿಯಾಗಿದೆ. ಕ್ರಿಕೆಟ್ ಕೋಚ್ ಮತ್ತು ಶಾಲಾ ದೈಹಿಕ ಶಿಕ್ಷಕನ ಬಳಿ 2500ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳಿವೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಖಾಸಗಿ ಶಾಲೆಯೊಂದರ ದೈಹಿಕ ಶಿಕ್ಷಕನಾಗಿರುವ ಮ್ಯಾಥ್ಯೂ ಕೆಲವು ಮಹಿಳೆಯರು ಮತ್ತು ಯುವತಿಯರ ಜೊತೆಗಿರುವ ಖಾಸಗಿ ಕ್ಷಣವನ್ನು ಸೆರೆ ಹಿಡಿದುಕೊಂಡಿದ್ದಾನೆ. ಆತನ ಬಳಿ ಸುಮಾರು 2500 ವಿಡಿಯೋಗಳಿವೆ ಎಂದು ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಮ್ಯಾಥ್ಯೂ ವಿರುದ್ಧ ಸಂತ್ರಸ್ಥ ಮಹಿಳೆ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಇದಾದ ನಂತರ ಸಂತ್ರಸ್ಥ ಮಹಿಳೆ ಕೋಣನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದರು. ಸದ್ಯ ಆರೋಪಿ ಎಬಿವಿ ಮಾಥ್ಯೂ ತಲೆ ಮರೆಸಿಕೊಂಡಿದ್ದು, ಅತನ ಬಂಧನಕ್ಕೆ ಕಾರ್ಯಚರಣೆ ಕೈಗೊಳ್ಳಲಾಗಿದೆ.
Advertisement