
ಬೆಂಗಳೂರು: ಕರ್ನಾಟಕ ಬಾಡಿಗೆ (ತಿದ್ದುಪಡಿ) ಸೇರಿದಂತೆ ಹಲವು ವಿಧೇಯಕಗಳಿಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಗುರುವಾರ ಅನುಮೋದನೆ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಬೆಂಗಳೂರಿನಂತಹ ನಗರಗಳಲ್ಲಿ ಬಾಡಿಗೆ ಮನೆಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ಮಾಲೀಕರು ಮತ್ತು ಬಾಡಿಗೆದಾರರ ನಡುವೆ ಘರ್ಷಣೆಗಳು ಹೆಚ್ಚಾಗುತ್ತಿವೆ. ಇದನ್ನು ತಡೆಯಲು ಮತ್ತು ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರ ಕರ್ನಾಟಕ ಬಾಡಿಗೆ ತಿದ್ದುಪಡಿಯನ್ನು ತರಲು ಮುಂದಾಗಿದೆ.
ರಾಜ್ಯದಲ್ಲಿ ಬಾಡಿಗೆ ಮನೆಗಳ ನಿಯಮಗಳನ್ನ ಬದಲಾಯಿಸಲು ಸರ್ಕಾರ ಮುಂದಾಗಿದ್ದು, ಕರ್ನಾಟಕ ಬಾಡಿಗೆ ಕಾಯ್ದೆ 1999ಕ್ಕೆ ತಿದ್ದುಪಡಿ ತರಲು ನಿರ್ಧರಿಸಿದೆ. ಈ ತಿದ್ದುಪಡಿಯಿಂದ ಬಾಡಿಗೆ ಮನೆಗಳಲ್ಲಿ ವಾಸ ಮಾಡುವವರು ಹಾಗೂ ಮನೆ ಮಾಲೀಕರು ಇಬ್ಬರಿಗೂ ಹೊಸ ನಿಯಮಗಳು ಅನ್ವಯ ಆಗುತ್ತವೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಕೈಗೊಳ್ಳಲಾಗಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ಕಾರ್ಯದಲ್ಲಿ ನಿಯೋಜಿಸಲ್ಪಡುವ ಅಧಿಕಾರಿ, ನೌಕರರು ಸಮೀಕ್ಷಾ ಕಾರ್ಯಕ್ಕೆ ಹಾಜರಾಗದೇ ಮತ್ತು ಕರ್ತವ್ಯಗಳನ್ನು ನಿರ್ವಹಿಸಿದೇ ಇರುವಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಶಿಸ್ತು ಕ್ರಮ ಜರುಗಿಸಲು ಬೆಂಗಳೂರು ವ್ಯಾಪ್ತಿಯಲ್ಲಿ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಅಧಿಕಾರ ನೀಡಲು ನಿರ್ಧರಿಸಲಾಗಿದೆ.ಕೇಂದ್ರ ಸರ್ಕಾರದ 15ನೇ ಹಣಕಾಸು ಯೋಜನೆಯಡಿ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಇಲಾಖೆಯ ವಿಸ್ತರಣೆ ಹಾಗೂ ಆಧುನೀಕರಣದ ರೂ. 329.00 ಕೋಟಿಗಳ ಪರಿಷ್ಕೃತ ಕ್ರಿಯಾ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ(ತಿದ್ದುಪಡಿ) ವಿಧೇಯಕ 2025, ರಾಜ್ಯ ಸಿವಿಲ್ ಸೇವೆಗಳು (ಮುಂಬಡ್ತಿಗಾಗಿ ಕಡ್ಡಾಯ ತರಬೇತಿ) ನಿಯಮಗಳು 2025, ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ಧಿ ನೀತಿ 2025-32ಕ್ಕೆ ಅನುಮೋದನೆ ನೀಡಲಾಗಿದೆ. ಉನ್ನತ ಶಿಕ್ಷಣ ಇಲಾಖೆಯಡಿ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ನಿರ್ವಹಣಾ ತಂತ್ರಾಂಶ-2 ನೇ ಆವೃತ್ತಿಯನ್ನು ರೂ. 40. 29 ಕೋಟಿ ಮೊತ್ತದಲ್ಲಿ ಅಭಿವೃದ್ಧಿಪಡಿಸಿ ಅನುಷ್ಟಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ರಾಜ್ಯ ರಕ್ಷೆ ಸುರಕ್ಷತಾ ನಿಧಿಯಡಿಯಲ್ಲಿ 110 ಜಂಕ್ಷನ್ ಗಳಲ್ಲಿ ಬೆಂಗಳೂರು ನಗರಕ್ಕೆ ಅವಶ್ಯಕವಿರುವ ಟ್ರಾಫಿಕ್ ಸಿಗ್ನಲ್ ಗಳನ್ನು ರೂ. 56. 45 ಕೋಟಿ ಅಂದಾಜು ವೆಚ್ಚದಲ್ಲಿ ಅನುಷ್ಟಾನಗೊಳಿಸಲು ನಿರ್ಧರಿಸಲಾಗಿದೆ. ಕಲಬುರಗಿ ಜಿಲ್ಲೆ ಸೇಡಂ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೇಗೇರಿಸಲು ಸಮ್ಮತಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನಲ್ಲಿ ರೂ. 16 ಕೋಟಿ ಅಂದಾಜು ವೆಚ್ಚದಲ್ಲಿ ಹೊಸದಾಗಿ ತಾಲ್ಲೂಕ್ ಪ್ರಜಾ ಸೌಧ ಕಟ್ಟಡ ನಿರ್ಮಾಣ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣಕ್ಕೆ 2ನೇ ಹಂತದ ಒಳ ಚರಂಡಿ ವ್ಯವಸ್ಥೆ ಒದಗಿಸುವ ರೂ. 128. 74 ಕೋಟಿಗಳ ಪರಿಷ್ಕೃತ ಡಿಪಿಆರ್ ಗೆ ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ.
Advertisement