
ಬೆಂಗಳೂರು: ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಆಗ್ರಹಿ ಕಾವಿ ಧರಿಸಿ ಓಡಾಡುತ್ತಿರುವ ಸ್ವಾಮೀಜಿಗಳು ತಮ್ಮ ಧರ್ಮದ ದೇವರು ಯಾರೆಂಬುದನ್ನು ತಿಳಿಸಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಬುಧವಾರ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಧರ್ಮದ ಕಾಲಂನಲ್ಲಿ ‘ಲಿಂಗಾಯತ’ ಅಥವಾ ‘ವೀರಶೈವ ಲಿಂಗಾಯತ’ ಎಂದು ಬರೆಸುವಂತೆ ಸೂಚಿಸುತ್ತಿರುವ ಮಠಾಧೀಶರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೂಪಿಸಿರುವ ಕುತಂತ್ರಕ್ಕೆ ಸ್ವಾಮೀಜಿಗಳು ಬಲಿಯಾಗಬಾರದು. ಹಿಂದೂಗಳು ಬ್ರಹ್ಮ, ವಿಷ್ಣು , ಮಹೇಶ್ವರರನ್ನು ದೇವರೆಂದು ಹೇಳುತ್ತೇವೆ. ಕ್ರಿಶ್ಚಿಯನ್, ಇಸ್ಲಾಂ ಸೇರಿ ಬೇರೆ ಬೇರೆ ಎಲ್ಲ ಧರ್ಮಗಳಿಗೂ ಒಂದೊಂದು ದೇವರಿದೆ. ಆ ದೇವರನ್ನು ಅವರು ಪೂಜೆ ಮಾಡುತ್ತಾರೆ. ಹಿಂದೂಗಳ ಶಕ್ತಿಶಾಲಿ ದೇವರೆಂದರೆ ಶಿವ. ಆ ಶಿವನನ್ನೇ ಬಸವಣ್ಣನವರು ಪೂಜೆ ಮಾಡಿದ್ದಾರೆ. ಅವರು ಹೊಸ ಧರ್ಮ ಜಾರಿಗೆ ತಂದರು ಎಂದು ನೀವು ಯಾವ ಆಧಾರದ ಮೇಲೆ ಹೇಳುತ್ತೀರಾ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ, ವೀರಶೈವ ಮತ್ತು ಲಿಂಗಾಯತರನ್ನು ವಿಭಜಿಸಲು ಪ್ರಯತ್ನಿಸಿದರು, ಬಳಿಕ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಚುನಾವಣೆಯಲ್ಲಿ ಸಿದ್ದರಾಮಯ್ಯ ಸ್ವತಃ ಅವಮಾನಕರ ಸೋಲನ್ನು ಎದುರಿಸಿದರು. ಇದೀಗ ಜಾತಿ ಜನಗಣತಿಯ ಅಡಿಯಲ್ಲಿ ವಿಭಿನ್ನ ಧರ್ಮಗಳನ್ನು ಸೇರ್ಪಡೆಗೊಳಿಸಲು ಅವಕಾಶ ಮಾಡಿಕೊಟ್ಟಿದ್ದಾರೆ, ಈ ಮೂಲಕ ಒಡಕು ಮೂಡಿಸಲು ಕುತಂತ್ರ ರಚಿಸಿದ್ದಾರೆ.
ಪ್ರತ್ಯೇಕ ಧರ್ಮ ಪ್ರತಿಪಾದನೆ ವಿವೇಚನಾರಹಿತ ವಿಚಾರ. ಹಿಂದೂ ಧರ್ಮವನ್ನು ಇಲ್ಲಿಯವರೆಗೆ ಒಡೆದದ್ದು ಸಾಕು. ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಹೇಳುವವರು ಮೊದಲು ತಾವು ಪೂಜಿಸುವ ದೇವರು ಯಾವುದೆಂದು ಅರಿತುಕೊಳ್ಳಲಿ. ಬಸವಣ್ಣನವರು ತಮ್ಮ ವಚನದಲ್ಲಿ ಕೂಡಲಸಂಗಮ ಎಂದು ಹೇಳುತ್ತಾರೆ. ಕೂಡಲಸಂಗಮ ಎಂದರೆ ಶಿವ. ಈಶ್ವರನನ್ನು ಕೂಡಲಸಂಗಮ ಎಂದು ಅವರು ಕರೆಯುತ್ತಿದ್ದರು. ಹಾಗಾಗಿ ಶಿವನೂ ನಮ್ಮವನೇ. ಭಸ್ಮವೂ ನಮ್ಮದೇ ಹಾಗೂ ಕಾವಿ, ರುದ್ರಾಕ್ಷಿ ಕೂಡ ಸನಾತನ ಧರ್ಮಕ್ಕೆ ಸೇರಿದ್ದಾಗಿದೆ. ಹೀಗಿರುವಾಗ ಪ್ರತ್ಯೇಕ ಧರ್ಮವೆಂದು ವಿಚಾರ ರಹಿತರಾಗಿ ಮಾತನಾಡುವುದು ಸರಿಯಲ್ಲ. ಹಿಂದೂಗಳ ಶಕ್ತಿಶಾಲಿ ದೇವರೆಂದರೆ ಶಿವ. ಆ ಶಿವನನ್ನೇ ಬಸವಣ್ಣನವರು ಪೂಜೆ ಮಾಡಿದ್ದಾರೆ. ಅವರು ಹೊಸ ಧರ್ಮ ಜಾರಿಗೆ ತಂದರು ಎಂದು ನೀವು ಯಾವ ಆಧಾರದ ಮೇಲೆ ಹೇಳುತ್ತೀರಾ ಎಂದು ಪ್ರಶ್ನಿಸಿದರು.
Advertisement