
ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿ ನಾಗರೀಕ ಕಾಮಗಾರಿಗಳಲ್ಲಿ ನಡೆದ ಶೇ.40 ಕಮಿಷನ್ ಆರೋಪ ಮತ್ತು ಅಕ್ರಮಗಳ ತನಿಖೆ ನಡೆಸುತ್ತಿದ್ದ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ಆಯೋಗವನ್ನು ರಾಜ್ಯ ಸರ್ಕಾರ ದಿಢೀರ್ ರದ್ದುಗೊಳಿಸಿದೆ.
ಆಯೋಗವು ಆಗಸ್ಟ್ 30 ರಂದು ತನ್ನ ವರದಿಯನ್ನು ಸಲ್ಲಿಸಿದ್ದು, ಸೆಪ್ಟೆಂಬರ್ 30 ರವರೆಗೆ ವಿಸ್ತರಣೆಯನ್ನು ಕೋರಿತ್ತು. ಆದರೆ, ಈ ಮನವಿಯನ್ನು ಸರ್ಕಾರ ಪರಿಗಣಿಸಿಲ್ಲ ಎಂದು ಹೇಳಲಾಗುತ್ತಿದೆ.
ಆಯೋಗದ ಅಧ್ಯಕ್ಷರ ನಿರ್ದೇಶನದ ಮೇರೆಗೆ ಸದಸ್ಯ ಕಾರ್ಯದರ್ಶಿ ಸೆಪ್ಟೆಂಬರ್ 22 ರಂದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು, ತನಿಖಾ ಆಯೋಗವನ್ನು ಸೆಪ್ಟೆಂಬರ್ 23 ರಂದು ಮುಕ್ತಾಯಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್ 22 ರಂದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದಿದ್ದು, ತನಿಖಾ ಆಯೋಗವನ್ನು ಸೆಪ್ಟೆಂಬರ್ 23 ರಂದು ಮುಕ್ತಾಯಗೊಳಿಸಲಾಗುವುದಾಗಿ ತಿಳಿಸಿದ್ದಾರೆಂದು ತಿಳಿದುಬಂದಿದೆ. ಅಲ್ಲದೆ, ಆಯೋಗಕ್ಕೆ ನೀಡಲಾಗಿದ್ದ ವಾಹನ ಹಾಗೂ ಸಿಬ್ಬಂದಿಯನ್ನು ಸರ್ಕಾರ ಮಂಗಳವಾರ ಸಂಜೆಯಿಂದಲೇ ವಾಪಸ್ ಪಡೆದಿದೆ ಎಂದು ಮೂಲಗಳು ತಿಳಿಸಿವೆ.
Advertisement