ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸುತ್ತಿರುವ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದ್ದು ಇದರಿಂದ ರಾಜ್ಯ ಸರ್ಕಾರಕ್ಕೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಜಾತಿ ಗಣತಿಗೆ ತಡೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರನ್ನೊಳಗೊಂಡ ವಿಭಾಗೀಯ ಪೀಠ, ಎರಡು ದಿನ ವಿವರವಾದ ವಾದಗಳನ್ನು ಆಲಿಸಿತು. ರಾಜ್ಯ ಸರ್ಕಾರದ ಜಾತಿಗಣತಿ ಸಮೀಕ್ಷೆ ನಡೆಸಲು ಕೆಲವು ಷರತ್ತುಗಳನ್ನು ಹೈಕೋರ್ಟ್ ವಿಧಿಸಿದ್ದು, ದತ್ತಾಂಶವನ್ನು ರಾಜ್ಯ ಸರ್ಕಾರ ಸೇರಿ ಯಾರಿಗೂ ಬಹಿರಂಗಪಡಿಸಬಾರದು. ದತ್ತಾಂಶದ ಗೌಪ್ಯತೆಯನ್ನು ಹಿಂದುಳಿದ ವರ್ಗಗಳ ಆಯೋಗ ರಕ್ಷಿಸಬೇಕು ಎಂದು ಸೂಚಿಸಿದೆ. ಈಮಧ್ಯೆ, ರಾಜ್ಯದಲ್ಲಿ ಜಾತಿ ಜನಗಣತಿ ಸಮೀಕ್ಷೆಯನ್ನು ನಡೆಸದ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ತಿಳಿಸಿದ್ದಾರೆ. ತಾಂತ್ರಿಕ ದೋಷ ಮತ್ತು ಸರ್ವರ್ ಸಮಸ್ಯೆಯಿಂದಾಗಿ ದತ್ತಾಂಶ ಸಂಗ್ರಹಣೆಗೆ ತೊಂದರೆಯಾಗುತ್ತಿದೆ ಎಂದು ಸಿಬ್ಬಂದಿ ಕಳವಳ ವ್ಯಕ್ತಪಡಿಸಿದ್ದ ಬೆನ್ನಲ್ಲೆ ಸಚಿವರು ಮಾತನಾಡಿದ್ದು ಇಂದು ಪರಿಸ್ಥಿತಿ ಸುಧಾರಿಸಿದೆ ಎಂದರು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸರಸ್ವತಿ ಸಮ್ಮಾನ್, ಪದ್ಮಭೂಷಣ ಪುರಸ್ಕೃತ ಸಾಹಿತಿ, ಡಾ. ಎಸ್ ಎಲ್ ಭೈರಪ್ಪನವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಭೈರಪ್ಪನವರ ಸ್ಮಾರಕ ನಿರ್ಮಿಸುವುದಾಗಿ ಘೋಷಿಸಿದರು. ಭೈರಪ್ಪನವರ ಕುಟುಂಬಸ್ಥರೊಂದಿಗೆ ಕೆಲ ಹೊತ್ತು ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೈರಪ್ಪ ಅವರು ಹೆಚ್ಚು ಸಮಯ ಮೈಸೂರಿನಲ್ಲಿಯೇ ಇದ್ದರು. ಹೀಗಾಗಿ ಮೈಸೂರಿನಲ್ಲಿಯೇ ಅವರ ಸ್ಮಾರಕ ನಿರ್ಮಿಸಲಾಗುವುದು ಎಂದರು. ಭೈರಪ್ಪರ ಹಲವು ಕಾದಂಬರಿಗಳು ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ಕನ್ನಡದ ಯಾವ ಸಾಹಿತಿಯ ಯಾವ ಕೃತಿಗಳೂ ಇಷ್ಟು ಭಾಷೆಗೆ ಅನುವಾದಗೊಂಡಿಲ್ಲ. ಅವರಿಗೆ ಸರಸ್ವತಿ ಸಮ್ಮಾನ್, ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳು ಬಂದಿವೆ. ಜ್ಞಾನಪೀಠ ಪ್ರಶಸ್ತಿಗೂ ಅರ್ಹರಾಗಿದ್ದು ಸಿಕ್ಕರೆ ನಿಜಕ್ಕೂ ಖುಷಿ ವಿಷಯ ಎಂದರು.
ಕೇಂದ್ರ ಸರ್ಕಾರದ ಗೃಹ ಇಲಾಖೆಯ ರಾಜ ಭಾಷಾ ಸಮಿತಿ ಬೆಂಗಳೂರಿನ ತಾಜ್ ವೆಸ್ಟ್ಎಂಡ್ ಹೋಟೆಲಿನಲ್ಲಿ ಇಂದು ಆಯೋಜಿಸಿದ್ದ ಹಿಂದಿ ಪ್ರಚಾರ ಸಭೆಗೆ ಕರ್ನಾಟಕ ರಕ್ಷಣಾ ವೇದಿಕೆ ಏಕಿಏಕಿ ದಾಳಿ ನಡೆಸಿದೆ. ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ಮಾರ್ಗದರ್ಶನದಲ್ಲಿ ನೂರಾರು ಕಾರ್ಯಕರ್ತರು ಪಂಚತಾರಾ ಹೋಟೆಲ್‌ನಲ್ಲಿ ಆರು ಮಂದಿ ಸಂಸದರು ಉಪಸ್ಥಿತಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದರು. ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಿಂದಿ ಭಾಷೆಯನ್ನು ಹಿಂದಿಯೇತರ ರಾಜ್ಯಗಳ ಮೇಲೆ ಹೇರಿಕೆ ಮಾಡುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕಾರ್ಯಕ್ರಮದ ನಡುವೆ ಕರವೇ ಕಾರ್ಯಕರ್ತರು ಯಾವುದೇ ಮುನ್ಸೂಚನೆ ನೀಡದೆ ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಹೈಗ್ರೌಂಡ್ಸ್ ಠಾಣೆ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿದರು.
ಧಾರವಾಡದಲ್ಲಿ ಸೆಪ್ಟೆಂಬರ್ 24ರ ರಾತ್ರಿ 'ಐ ಲವ್ ಮೊಹಮ್ಮದ್' ಎಂಬ ಸಂದೇಶವಿರುವ ಪೋಸ್ಟರ್‌ಗಳು ಕಾಣಿಸಿಕೊಂಡಿದ್ದು, ಕೋಮು ಉದ್ವಿಗ್ನತೆ ಭುಗಿಲೆದ್ದಿದೆ. ಇದು ಎರಡು ಗುಂಪುಗಳ ನಡುವೆ ಕಲ್ಲು ತೂರಾಟಕ್ಕೆ ಕಾರಣವಾಯಿತು. ಕಾರ್ಲ್ ಮಾರ್ಕ್ಸ್ ನಗರದಲ್ಲಿ ಪೋಸ್ಟರ್‌ಗಳನ್ನು ತೆಗೆದುಹಾಕುವ ವಿಷಯದಲ್ಲಿ ಎರಡು ಸಮುದಾಯಗಳ ಸದಸ್ಯರ ನಡುವೆ ಘರ್ಷಣೆ ನಡೆದಿದೆ. ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿ ಐದು ನಿಮಿಷಗಳಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು ಎಂದು ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು. ಸದ್ಯ ಬ್ಯಾನರ್‌ಗಳನ್ನು ತೆಗೆಯಲಾಗಿದ್ದು ಈಗ ಪರಿಸ್ಥಿತಿ ಸಂಪೂರ್ಣವಾಗಿ ಶಾಂತವಾಗಿದೆ ಎಂದರು. ಘಟನೆ ಸಂಬಂಧ 21 ಪ್ರಕರಣಗಳು ದಾಖಲಾಗಿದ್ದು 38 ಮಂದಿಯನ್ನು ಬಂಧಿಸಲಾಗಿದೆ ಎಂದರು.
ಎಲ್‌ಪಿಜಿ ಸಿಲಿಂಡರ್‌ಗಳು ಮತ್ತು ಆಸ್ತಿ ಬಾಡಿಗೆಗಳ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡದ ಕಾರಣ ಜಿಎಸ್‌ಟಿ ದರ ಕಡಿತದ ಪ್ರಯೋಜನಗಳನ್ನು ಗ್ರಾಹಕರಿಗೆ ವರ್ಗಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ತಿಳಿಸಿದೆ. ಆಸ್ತಿ ಬಾಡಿಗೆ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡುವ ಮೂಲಕ ಪರಿಹಾರವನ್ನು ಒದಗಿಸಬೇಕು ಮತ್ತು ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಹೋಟೆಲ್‌ಗಳು ಬದುಕುಳಿಯಲು ಸಹಾಯ ಮಾಡಬೇಕು ಎಂದು ಸಂಘವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒಳಗೊಂಡ ಜಿಎಸ್‌ಟಿ ಮಂಡಳಿಯು ಸೆಪ್ಟೆಂಬರ್ 22 ರಂದು ನವರಾತ್ರಿಯ ಮೊದಲ ದಿನ ಸುಮಾರು 375 ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ ದರಗಳನ್ನು ಕಡಿಮೆ ಮಾಡಿತ್ತು.
Advertisement