ಗುಂಡಿ ಮುಚ್ಚುವ ಕೆಲಸ ಪ್ರಗತಿಯಲ್ಲಿ: ಮುಖ್ಯಮಂತ್ರಿಗಳಿಂದ 750 ಕೋಟಿ ರೂ. ಅನುದಾನ; ಕೇಂದ್ರ ಸರಕಾರ ಯಾವುದೇ ನೆರವು ಕೊಟ್ಟಿಲ್ಲ- dks

ಬೆಂಗಳೂರಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಯಾವುದೇ ಅನುದಾನ ಕೊಟ್ಟಿಲ್ಲ ಎಂಬುದನ್ನು ಪ್ರತಿಭಟನೆ ಮಾಡುತ್ತಿರುವ ಬಿಜೆಪಿಗರು ಅರ್ಥಮಾಡಿಕೊಳ್ಳಬೇಕು. ನಾವು ಕೇಂದ್ರಕ್ಕೆ ಹೆಚ್ಚಿನ ತೆರಿಗೆ ಪಾವತಿ ಮಾಡುತ್ತಿದ್ದರೂ ಅವರು ಅನುದಾನ ನೀಡಿಲ್ಲ.
DK Shivakumar
ಡಿ.ಕೆ ಶಿವಕುಮಾರ್
Updated on

ಬೆಂಗಳೂರು: ಬೆಂಗಳೂರಿನ ರಸ್ತೆ ಗುಂಡಿಗಳು ಬಿಜೆಪಿ ಸರಕಾರದ ದುರಾಡಳಿತದ ಫಲ. ರಸ್ತೆಗುಂಡಿಗಳನ್ನು ಮುಚ್ಚಲು ನಾವು ಬದ್ಧರಾಗಿದ್ದು, ಇದಕ್ಕಾಗಿಯೇ ಮುಖ್ಯಮಂತ್ರಿಗಳು 750 ಕೋಟಿ ರೂ. ಅನುದಾನ ನೀಡಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ಖ್ಯಾತ ಸಾಹಿತಿ ಎಸ್ ಎಲ್ ಬೈರಪ್ಪನವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯಿಸಿದರು.

ನಗರದಲ್ಲಿ ರಸ್ತೆಗುಂಡಿ ವಿಚಾರವಾಗಿ ಬಿಜೆಪಿ ಪ್ರತಿಭಟನೆ ಬಗ್ಗೆ ಕೇಳಿದಾಗ, “ನಗರದಲ್ಲಿ ರಸ್ತೆಗುಂಡಿಗಳಿರುವುದು ನಿಜ. ಅವುಗಳನ್ನು ಮುಚ್ಚಲು ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಎಲ್ಲೆಲ್ಲಿ ರಸ್ತೆಗುಂಡಿಗಳಿವೆ ಎಂದು ಮಾಹಿತಿ ನೀಡಿ ಎಂದು ಸಾರ್ವಜನಿಕರು, ಪೊಲೀಸರಿಗೆ ನಾನೇ ಮನವಿ ಮಾಡಿದ್ದೇನೆ. ಬಿಜೆಪಿ ಸರ್ಕಾರ ದುರಾಡಳಿತದ ಪರಿಣಾಮವಾಗಿ ಈ ಪರಿಸ್ಥಿತಿ ಬಂದಿದೆ. ನಾವು ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ.

ಬೆಂಗಳೂರಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಯಾವುದೇ ಅನುದಾನ ಕೊಟ್ಟಿಲ್ಲ ಎಂಬುದನ್ನು ಪ್ರತಿಭಟನೆ ಮಾಡುತ್ತಿರುವ ಬಿಜೆಪಿಗರು ಅರ್ಥಮಾಡಿಕೊಳ್ಳಬೇಕು. ನಾವು ಕೇಂದ್ರಕ್ಕೆ ಹೆಚ್ಚಿನ ತೆರಿಗೆ ಪಾವತಿ ಮಾಡುತ್ತಿದ್ದರೂ ಅವರು ಅನುದಾನ ನೀಡಿಲ್ಲ. ಬೊಮ್ಮಾಯಿ ಅವರ ಸರ್ಕಾರದ ಅವಧಿಯಲ್ಲೂ ಕೇಂದ್ರ ಸರ್ಕಾರದಿಂದ ಬೆಂಗಳೂರಿಗೆ ಸೂಕ್ತ ಅನುದಾನ ಸಿಕ್ಕಿಲ್ಲ. ಆದರೂ ನಾವು ಬೆಂಗಳೂರಿನ ಹಿತ ಕಾಪಾಡುತ್ತೇವೆ. ಬಿಜೆಪಿಗರು ಪ್ರತಿಭಟನೆ ಮಾಡಲಿ, ನಮ್ಮ ಕಾರ್ಯಕರ್ತರು ಬಿಜೆಪಿ ಆಡಳಿತದಲ್ಲಿರುವ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಇತರೆ ಪಾಲಿಕೆಗಳಲ್ಲಿರುವ ರಸ್ತೆಗುಂಡಿ ಸಮಸ್ಯೆ ಬಗ್ಗೆ ಪ್ರತಿಭಟಿಸಲಿದ್ದಾರೆ ಎಂದು ತಿಳಿಸಿದರು. ಉದ್ಯಮಿಗಳ ಜೊತೆ ಚರ್ಚೆ ಮಾಡುತ್ತೀರಾ ಎಂದು ಕೇಳಿದಾಗ, “ನಮ್ಮ ಸ್ನೇಹಿತರಾದ ಅವರುಗಳು ಕೂಡ ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು” ಎಂದು ತಿಳಿಸಿದರು.

DK Shivakumar
'ಹೋದಲ್ಲಿ, ಬಂದಲ್ಲಿ ಹೊಂಡ-ಗುಂಡಿ': ಬೆಂಗಳೂರು ಸೇರಿ ರಾಜ್ಯಾದ್ಯಂತ ಬಿಜೆಪಿ 'ರಸ್ತೆ ತಡೆ' ಪ್ರತಿಭಟನೆ; Video

ಭೈರಪ್ಪ ಅವರದ್ದು ನೇರ ನುಡಿ, ಗಟ್ಟಿ ವ್ಯಕ್ತಿತ್ವ

"1994ರಲ್ಲಿ ಕನಕಪುರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲಾಗಿತ್ತು. ಆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಭೈರಪ್ಪ ಅವರು ವಹಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ನನಗೆ ಅವರ ಪರಿಚಯವಾಗಿತ್ತು. ಅವರ ಮಾತು, ಬರವಣಿಗೆ ಸದಾ ನೇರನುಡಿಯಿಂದ ಕೂಡಿತ್ತು. ಅಂದು ಬನಶಂಕರಿಯಿಂದ ಮೆರವಣಿಗೆ ಮೂಲಕ ಅವರನ್ನು ಕರೆದೊಯ್ಯಲಾಗಿತ್ತು” ಎಂದು ತಿಳಿಸಿದರು.

“ಅವರ ಕಾದಂಬರಿಗಳು ವಿದೇಶಿ ಭಾಷೆಗಳಿಗೆ ಭಾಷಾಂತರವಾಗಿದ್ದು, ಚಲನಚಿತ್ರಗಳಾಗಿಯೂ ಮೂಡಿಬಂದಿವೆ. ಭೈರಪ್ಪ ಅವರಿಗೆ ಮಾಧ್ಯಮಗಳು ಕೂಡ ಅತ್ಯುತ್ತಮ ಗೌರವ ಸಲ್ಲಿಸುತ್ತಿದ್ದು, ಎಲ್ಲಾ ಮಾಧ್ಯಮಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಭೈರಪ್ಪ ಅವರು ತಮ್ಮ ಬರವಣಿಗೆಯಲ್ಲಿ ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದಾರೆ. ಅವರಿಗೆ ರಾಷ್ಟ್ರ ಪ್ರಶಸ್ತಿ ಸೇರಿದಂತೆ ಪದ್ಮ ಪ್ರಶಸ್ತಿಗಳು ಲಭಿಸಿದೆ. ಇಡೀ ದೇಶದ ಗಣ್ಯರು ಭೈರಪ್ಪ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಅವರ ಸಿದ್ಧಾಂತ, ನಿಲುವು, ನಡೆ ಕೇವಲ ಸಾಹಿತ್ಯ ಲೋಕಕ್ಕೆ ಮಾತ್ರವಲ್ಲ ಸಮಾಜದ ಎಲ್ಲಾ ವರ್ಗಕ್ಕೆ ಮಾರ್ಗದರ್ಶನವಾಗಿದೆ” ಎಂದರು.

“ಬಹಳ ಚಿಕ್ಕ ವಯಸ್ಸಿಗೆ ಸಾಹಿತ್ಯ ಲೋಕಕ್ಕೆ ಹೆಜ್ಜೆ ಇಟ್ಟು ತಮ್ಮ ಹೋರಾಟ ಆರಂಭಿಸಿದ್ದರು. ಅವರದು ಬಹಳ ಗಟ್ಟಿ ವ್ಯಕ್ತಿತ್ವ. ಮುಖ್ಯಮಂತ್ರಿಗಳು ಕೂಡ ಇವರ ಅಂತಿಮ ದರ್ಶನ ಪಡೆಯಲಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ಮಾಡಲಾಗುವುದು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ವೈಯಕ್ತಿಕವಾಗಿ, ಸರ್ಕಾರ ಹಾಗೂ ಪಕ್ಷದ ಪರವಾಗಿ ಪ್ರಾರ್ಥಿಸುತ್ತೇನೆ” ಎಂದು ಹೇಳಿದರು.

ಬಿಹಾರದ ಪಾಟ್ನಾದಲ್ಲಿ ನಡೆದ ಸಿಡಬ್ಲ್ಯೂಸಿ ಸಭೆಯ ನಿರ್ಣಯಗಳ ಕುರಿತು ಕೇಳಿದಾಗ, “ಈ ವಿಚಾರವಾಗಿ ನಾನು ಇಂದು ಮಾತನಾಡುವುದಿಲ್ಲ. ನಾವು ಸಂವಿಧಾನಬದ್ಧವಾಗಿ ಸಿಕ್ಕಿರುವ ಒಬ್ಬ ವ್ಯಕ್ತಿಗೆ ಒಂದು ಮತ ಎಂಬ ಹಕ್ಕಿನ ರಕ್ಷಣೆಗೆ ನಾವು ಬದ್ಧವಾಗಿದ್ದೇವೆ” ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com