
ಮಂಗಳೂರು: ಧರ್ಮಸ್ಥಳಕ್ಕೆ ಭಕ್ತರು ಭೇಟಿ ನೀಡುವುದನ್ನು ತಡೆಯುವ ಸಂಚುಕೋರರ ಉದ್ದೇಶ ಎಸ್ಐಟಿಯಿಂದ ಬಹಿರಂಗವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಭಾನುವಾರ ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ಚಂಡಿಕಾ ಹೋಮ ನಡೆಸಿದ ನಂತರ ಬೆಳ್ತಂಗಡಿ ತಾಲ್ಲೂಕಿನ 81 ಗ್ರಾಮಸ್ಥರು ಆಯೋಜಿಸಿದ್ದ ಸತ್ಯ ದರ್ಶನ ಸಮಾವೇಶದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಎಸ್‌ಐಟಿ ರಚಿಸಿದ್ದಕ್ಕಾಗಿ ರಾಜ್ಯ ಸರ್ಕಾರಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಎಸ್ಐಟಿ ರಚನೆಯಾಗಿರದಿದ್ದರೆ, ಸತ್ಯ ಹೊರಬರುತ್ತಿರಲಿಲ್ಲ. ಮೊದಲ ದಿನವೇ ಎಸ್‌ಐಟಿ ರಚನೆಯನ್ನು ನಾವು ಸ್ವಾಗತಿಸಿದ್ದೆವು. ಇದೀಗ ಸಂಚುಕೋರರು ಯಾರು ಎಂಬುದು ಬಹಿರಂಗವಾಗಿದೆ ಎಂದು ಹೇಳಿದರು.
ಧರ್ಮಸ್ಥಳಕ್ಕೆ ಭಕ್ತರು ಭೇಟಿ ನೀಡುವುದನ್ನು ನಿಲ್ಲಿಸಿ, ಕ್ಷೇತ್ರವನ್ನು ನಾಶಪಡಿಸುವುದು ಅವರ (ಪಿತೂರಿಗಾರರ) ಉದ್ದೇಶವಾಗಿತ್ತು. ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ಸ್ವಾಮಿಯಿಂದ ಮಾತ್ರ ಸಾಧ್ಯ. ಚಿನ್ನವನ್ನು ಬೆಂಕಿಗೆ ಹಾಕಿದರೆ ಅದು ಇನ್ನಷ್ಟು ಕಂಗೊಳಿಸುವಂತೆ, ಧರ್ಮಸ್ಥಳವೂ ಈ ಸವಾಲಿನ ನಡುವೆ ಇನ್ನಷ್ಟು ಬೆಳಗುತ್ತಿದೆ. ಇದೀಗ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಬೇರೆ ಬೇರೆ ಜಿಲ್ಲೆಗಳಿಂದ ಸಾವಿರಾರು ಜನರು ಬಂದು ಬೆಂಬಲ ತೋರಿಸಿದ್ದಾರೆ. ನಮ್ಮ ತಾಲೂಕಿನಿಂದ ಜನರು ಬರಲಿಲ್ಲ ಎಂಬ ಮಾತು ಮೊದಲು ಇದ್ದರೂ, ಇಂದು ಬೆಳ್ತಂಗಡಿ ತಾಲೂಕಿನ ಜನರು ಸಹ ಆಗಮಿಸಿ ಕೃತಜ್ಞತೆ ತೋರಿದ್ದಾರೆ ಎಂದು ತಿಳಿಸಿದರು.
ಶೀಘ್ರದಲ್ಲೇ, ಧರ್ಮಸ್ಥಳದಿಂದ ಹಲವಾರು ಸಮಾಜ ಪರ ಕಲ್ಯಾಣ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುವುದು. ಭಕ್ತರ ಬೆಂಬಲ ನಮ್ಮ ಬಾಂಧವ್ಯವನ್ನು ಬಲಪಡಿಸಿದೆ ಎಂದು ಹೇಳಿದರು
Advertisement