
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ನಡೆಯುತ್ತಿರುವ ಸಮಯದಲ್ಲೇ ಸಾಂಸ್ಕೃತಿಕ ನಗರಿ ಬೆಚ್ಚಿ ಬೀಳುವಂತಹ ಪೈಶಾಚಿಕ ಕೃತ್ಯವೊಂದು ಬೆಳಕಿಗೆ ಬಂದಿದೆ.
ಮೈಸೂರಿನ ವಿಜಯನಗರ ಪೊಲೀಸರು, ಸರ್ಕಾರೇತರ ಸಂಸ್ಥೆ(ಎನ್ ಜಿಒ) ಒಡನಾಡಿ ಸಹಯೋಗದೊಂದಿಗೆ ಅಪ್ರಾಪ್ತ ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ವರ್ಜಿನ್ ಸೆಕ್ಸ್ ದಂಧೆಯನ್ನು ಬೇಧಿಸಿದ್ದಾರೆ.
ಇತ್ತೀಚೆಗೆ ಋತುಮತಿಯಾದ ಅಪ್ರಾಪ್ತ ಬಾಲಕಿಯೊಂದಿಗೆ ಲೈಂಗಿಕ ಸಂಪರ್ಕ ಏರ್ಪಡಿಸಲು 20 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದ ಬೆಂಗಳೂರಿನ ನಿವಾಸಿ ಶೋಭಾ ಮತ್ತು ಆಕೆಯ ಸಹಚರ ತುಳಸಿ ಕುಮಾರ್ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಿದ್ದು, ಇವರ ಹಿಂದೆ ದೊಡ್ಡ ಜಾಲವಿದೆ ಎಂದು ಅನುಮಾನ ವ್ಯಕ್ತವಾಗಿದೆ.
ಋತುಮತಿಯಾದ ಬಾಲಕಿಯೊಂದಿಗೆ ಸೆಕ್ಸ್ ಮಾಡುವುದರಿಂದ ಅನೇಕ ಮಾನಸಿಕ ಮತ್ತು ಲೈಂಗಿಕ ಕಾಯಿಲೆಗಳು ದೂರವಾಗುತ್ತವೆ ಎಂಬ ಮೂಢನಂಬಿಕೆಯನ್ನು ದಂಧೆಗೆ ಬಳಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಶೋಭಾ ಅಂತಹ ಸಮಸ್ಯೆಗಳನ್ನು ಹೊಂದಿರುವ ಪುರುಷರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಒಡನಾಡಿ ಸಂಸ್ಥೆಗೆ ಸಿಕ್ಕಿತ್ತು. 12-13 ವರ್ಷದ ಬಾಲಕಿಯನ್ನು ವಾಟ್ಸಾಪ್ ವಿಡಿಯೋ ಮೂಲಕ ಕೆಲವು ಗ್ರಾಹಕರಿಗೆ ತೋರಿಸಲಾಗಿದೆ ಎಂಬ ಮಾಹಿತಿಯೂ ಎನ್‌ಜಿಒ ಸಿಬ್ಬಂದಿಗೆ ಸಿಕ್ಕಿತ್ತು. ತಕ್ಷಣ ಎಚ್ಚೆತ್ತ ಒಡನಾಡಿ, ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದೆ.
ಎನ್‌ಜಿಒ ಸಿಬ್ಬಂದಿ, ಗ್ರಾಹಕನಂತೆ ನಟಿಸಿ ಮಹಿಳೆಯ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾದರು ಮತ್ತು ಅಪ್ರಾಪ್ತ ಬಾಲಕಿಯನ್ನು ಮೈಸೂರಿಗೆ ಕರೆತರುವಂತೆ ಕೇಳಿಕೊಂಡರು. ಮಹಿಳೆ ತಕ್ಷಣ ಸಭೆ ಏರ್ಪಡಿಸಲು ಒಪ್ಪಿಕೊಂಡರು. ಯೋಜನೆಯಂತೆ, ಮಹಿಳೆ ಶನಿವಾರ ಮಧ್ಯಾಹ್ನ 2 ಗಂಟೆಯೊಳಗೆ ಹುಡುಗಿಯೊಂದಿಗೆ ಬರುವುದಾಗಿ ಭರವಸೆ ನೀಡಿದ್ದಳು.
ಅದರಂತೆ ಒಡನಾಡಿ ಸಂಸ್ಥಾಪಕರಾದ ಕೆ.ವಿ. ಸ್ಟಾನ್ಲಿ ಮತ್ತು ಎಂ.ಎಲ್. ಪರಶುರಾಮ ಹಾಗೂ ವಿಜಯನಗರ ಪೊಲೀಸರು ಮಹಿಳೆಯನ್ನು ಹಿಡಿಯಲು ಬಲೆ ಬೀಸಿದರು. ವಿಜಯನಗರ 4ನೇ ಹಂತದಲ್ಲಿರುವ ಸರ್ಕಾರಿ ಬಾಲಕಿಯರ ಮಕ್ಕಳ ಗೃಹಕ್ಕೆ ಬರುವಂತೆ ಅವರು ಆಕೆಗೆ ತಿಳಿಸಿದರು. ಆ ಮಹಿಳೆ ಬಾಲಕಿಯನ್ನು ಒಬ್ಬ ಪುರುಷನೊಂದಿಗೆ ಕರೆತಂದಳು. ಅವರೊಂದಿಗೆ ಬಂದ ವ್ಯಕ್ತಿ ದೂರದಲ್ಲಿ ನಿಂತು ಎಚ್ಚರಿಕೆಯಿಂದ ಇತರರನ್ನು ಗಮನಿಸುತ್ತಿದ್ದರು.
ಒಡನಾಡಿ ಸದಸ್ಯರು, ಕಾರಿನಲ್ಲಿ ಬಂದ ಮಹಿಳೆಯೊಂದಿಗೆ ಮಾತುಕತೆ ನಡೆಸಲು ಪ್ರಾರಂಭಿಸಿದರು. ಈ ಮಧ್ಯೆ, ಬಾಲಕಿಯೊಂದಿಗೆ ಲೈಂಗಿಕ ಕ್ರಿಯೆಗೆ ವ್ಯವಸ್ಥೆ ಮಾಡಲು, ಆ ಮಹಿಳೆ 20 ಲಕ್ಷ ರೂ.ಗೆ ಬೇಡಿಕೆ ಇಡುತ್ತಿದ್ದಾಗ ಪೊಲೀಸರು ಆಕೆಯನ್ನು ಸುತ್ತುವರೆದರು. ಈ ವೇಳೆ ಮಹಿಳೆ ಬಾಲಕಿ ತನ್ನ ಮಗಳು, ನಂತರ ತನ್ನ ಸೊಸೆ, ನಂತರ ತನ್ನ ದತ್ತುಪುತ್ರಿ ಎಂದು ಪರಿಚಯಿಸಿಕೊಂಡಳು. ಆದರೆ ಅಂತಿಮವಾಗಿ ಆಕೆ ವೇಶ್ಯಾವಾಟಿಕೆ ನಡೆಸುತ್ತಿರುವುದಾಗಿ ಒಪ್ಪಿಕೊಂಡಳು. ಆಕೆಯ ಜೊತೆಗಿದ್ದ ವ್ಯಕ್ತಿ ತಾನು ಆ ಮಹಿಳೆಯ ಪತಿ ಎಂದು ಹೇಳಿದ್ದಾನೆ.
ಪೊಲೀಸರು ಕಾರ್ಯಪ್ರವೃತ್ತರಾಗಿ ಬಾಲಕಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ಶೋಭಾ ಮತ್ತು ತುಳಸಿ ಕುಮಾರ್ ಇಬ್ಬರನ್ನು ಬಂಧಿಸಿದ್ದಾರೆ. ರಕ್ಷಿಸಲ್ಪಟ್ಟ ಬಾಲಕಿಯನ್ನು ಮಕ್ಕಳ ಗೃಹಕ್ಕೆ ಒಪ್ಪಿಸಲಾಗಿದೆ.
ಬಾಲಕಿ 6ನೇ ತರಗತಿಯಲ್ಲಿ ಓದುತ್ತಿದ್ದಾಳೆ ಎಂದು ವರದಿಯಾಗಿದೆ. ಬಾಲಕಿಯ ಬಗ್ಗೆ ಮತ್ತು ಈ ಮಹಿಳೆಗೆ ಬಾಲಕಿ ಹೇಗೆ ಪರಿಚಯವಾದಳು ಎಂಬುದರ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಈ ಸಂಬಂಧ ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ವಿರುದ್ಧ POCSO ಕಾಯ್ದೆಯಡಿ ಕ್ರಮ ತೆಗೆದುಕೊಂಡಿದ್ದೇವೆ. ದೊಡ್ಡ ಜಾಲವಿದ್ದರೆ ತನಿಖೆಯಲ್ಲಿ ಬಯಲ್ಪಡಿಸುತ್ತೇವೆ ಎಂದು ಹೇಳಿದ್ದಾರೆ.
Advertisement