
ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸಬಾರದು ಎಂದು ಜನಪ್ರತಿನಿಧಿಗಳು ಕರೆ ನೀಡುತ್ತಿರುವುದು ಹೈಕೋರ್ಟ್ ಆದೇಶದ ಆಶಯಕ್ಕೆ ವಿರುದ್ಧ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ಆರ್.ನಾಯ್ಕ್ ಅವರು ಸೋಮವಾರ ಹೇಳಿದ್ದಾರೆ.
ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಅವರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದ ಕುಟುಂಬಗಳ ಹಾಗೂ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸೆ.22ರಿಂದ ಪ್ರಾರಂಭಿಸಿದ್ದು, ಪ್ರಗತಿಯಲ್ಲಿದೆ. ರಾಜ್ಯದ ಸಂಪೂರ್ಣ ಜನಸಂಖ್ಯೆಯನ್ನು ಸಮೀಕ್ಷೆಗೆ ಒಳಪಡಿಸಲು ಉದ್ದೇಶಿಸಲಾಗಿದ್ದರೂ, ಸಮೀಕ್ಷೆಯಲ್ಲಿ ಭಾಗವಹಿಸುವುದು ಜನರ ಸ್ವ-ಇಚ್ಛೆಗೆ ಬಿಡಲಾಗಿದೆ. ಮಾಹಿತಿಯನ್ನು ನೀಡಬೇಕು ಎಂದು ಒತ್ತಾಯ ಮಾಡುತ್ತಿಲ್ಲ.
ಆದರೆ, ಸೆ.28ರಂದು ಕೆಲವು ಜನಪ್ರತಿನಿಧಿಗಳು, ಕೋರ್ಟ್ ಆದೇಶವನ್ನು ಉಲ್ಲೇಖಿಸಿ, ತಾವು ಈ ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ. ಸಾರ್ವಜನಿಕರೂ ಭಾಗವಹಿಸಬಾರದೆಂದು ಹೇಳಿಕೆಗಳನ್ನು ನೀಡಿರುವುದು ಪತ್ರಿಕೆಗಳು ಹಾಗೂ ಇತರೆ ಮಾಧ್ಯಮಗಳಲ್ಲಿ ವರದಿಯಾಗಿದೆ.
ಜನಪ್ರತಿನಿಧಿಗಳು ಹೇಳಿಕೆಗಳ ಮೂಲಕ ಸಾರ್ವಜನಿಕರು ಸಮೀಕ್ಷೆಯಲ್ಲಿ ಭಾಗವಹಿಸದಂತೆ ಪ್ರೇರೇಪಿಸುತ್ತಿದ್ದಾರೆ. ಆದರೆ, ವಾಸ್ತವವಾಗಿ ಈ ರೀತಿಯ ಹೇಳಿಕೆಗಳು ಕೋರ್ಟ್ ಆದೇಶದ ಆಶಯಗಳಿಗೆ ವಿರುದ್ಧವಾಗಿವೆ. ರಾಜ್ಯದ ಎಲ್ಲ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ಮಾಹಿತಿಯನ್ನು ಸಂಗ್ರಹಿಸುವ ಉದ್ದೇಶದಿಂದ ಮತ್ತು ಕಲ್ಯಾಣ ಹಾಗೂ ಏಳಿಗೆಗಾಗಿ ಯೋಜನೆಗಳನ್ನು ರೂಪಿಸಲು ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ.
ಆದರೂ ಸಾರ್ವಜನಿಕ ಹೇಳಿಕೆಗಳು ಸಮೀಕ್ಷೆಯಲ್ಲಿ ಜನರು ಭಾಗವಹಿಸದಂತೆ ಪ್ರಚೋದಿಸುತ್ತಿದ್ದು, ಸಾರ್ವಜನಿಕ ಹಿತಕ್ಕಾಗಿ ಕೈಗೊಳ್ಳಲಾದ ಸಮೀಕ್ಷೆಯ ಉದ್ದೇಶಕ್ಕೆ ವಿರುದ್ಧವಾಗಿವೆ. ನಾಗರಿಕರು ಯಾವುದೇ ಬಲವಂತವಿಲ್ಲದೆ ಸ್ವ-ಇಚ್ಛೆಯಿಂದ ಸಮೀಕ್ಷೆಯಲ್ಲಿ ಭಾಗವಹಿಸುತ್ತಿರುವ ಸಂದರ್ಭದಲ್ಲಿ, ಅವರ ಭಾಗವಹಿಸುವಿಕೆಯನ್ನು ತಡೆಯುವ ಇಂತಹ ಹೇಳಿಕೆಗಳು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿವೆ. ಹೀಗಾಗಿ ಈ ರೀತಿಯ ಹೇಳಿಕೆಗಳನ್ನು ನೀಡಬಾರದು ಎಂದು ಹೇಳಿದ್ದಾರೆ.
Advertisement