ಭೀಮಾ, ಕೃಷ್ಣಾ ನದಿ ಅಬ್ಬರಕ್ಕೆ ಕಲ್ಯಾಣ ಕರ್ನಾಟಕ ತತ್ತರಿಸಿ ಹೋಗಿದೆ. ಅಪಾರ ಬೆಳೆ, ಆಸ್ತಿ ಪಾಸ್ತಿ ನಾಶವಾಗಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಇಂದು ಕಲ್ಯಾಣ ಕರ್ನಾಟಕ ಭಾಗದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಬೀದರ್, ಕಲಬುರಗಿ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಯ ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ವೀಕ್ಷಣೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕಲಬುರ್ಗಿ ವಿಮಾನ ನಿಲ್ದಾಣದಲ್ಲಿಯೇ ಕಲಬುರಗಿ, ಬೀದರ್, ಯಾದಗಿರಿ ಹಾಗು ವಿಜಯಪುರ ಜಿಲ್ಲಾ ಅಧಿಕಾರಿಗಳು ಮತ್ತು ಉಸ್ತುವಾರಿ ಕಾರ್ಯದರ್ಶಿಗಳ ಜೊತೆ ಪ್ರಾಥಮಿಕ ಸಭೆ ನಡೆಸಿ, ವಿವರವಾದ ಮಾಹಿತಿ ಪಡೆದುಕೊಂಡರು. ಮುಖ್ಯಮಂತ್ರಿಗಳ ವೈಮಾನಿಕ ಸಮೀಕ್ಷೆಗೆ ಬಿಜೆಪಿ ವ್ಯಂಗ್ಯವಾಡಿದೆ. ಕೇರಳ ಹಾಗೂ ಹಿಮಾಚಲ ಪ್ರದೇಶದಲ್ಲಿ ಭೂ ಕುಸಿತ-ಪ್ರವಾಹವಾದಾಗ ಹೆಲಿಕಾಪ್ಟರ್ ವೇಗದಲ್ಲಿ ಪರಿಹಾರ ಘೋಷಿಸಿದ್ದ ಸಿಎಂ ಸಿದ್ದರಾಮಯ್ಯ, ಪ್ರವಾಹ ಪೀಡಿತ ಉತ್ತರ ಕರ್ನಾಟಕಕ್ಕೆ ಪರಿಹಾರ ನೀಡುವಲ್ಲಿ ಮಾತ್ರ ಬುಲ್ಡೋಜರ್ ವೇಗಕ್ಕೆ ಮೊರೆ ಹೋಗಿದ್ದಾರೆ ಏಕೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡಕ್ಕೆ ತನಿಖೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರ ನಿರ್ದೇಶಿಸಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ ವರದಿಗಳು ಬಾಕಿ ಉಳಿದಿವೆ. ಕಾರ್ಯಾಚರಣೆ ವೇಳೆ ಸಿಕ್ಕ ಮೂಳೆಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಈ ಹಿಂದೆ ಪತ್ತೆಯಾದ ವಸ್ತುಗಳ ಕುರಿತು ವರದಿಗಳನ್ನು ಅಂತಿಮಗೊಳಿಸಿ ಕಳುಹಿಸುವಂತೆ ಕೇಳಿದ್ದೇವೆ. ತನಿಖೆಗೆ ಸಂಬಂಧಿಸಿದಂತೆ ಒಬ್ಬರ ನಂತರ ಒಬ್ಬರು ಅರ್ಜಿಗಳನ್ನು ಸಲ್ಲಿಸಲು ಬರುವುದು ಮುಂದುವರಿಯಲು ಸಾಧ್ಯವಿಲ್ಲ. ಇದಕ್ಕೆ ಒಂದು ಅಂತ್ಯ ಇರಬೇಕು. ಹೀಗಾಗಿ ತನಿಖೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಎಸ್‌ಐಟಿಗೆ ಸೂಚಿಸಲಾಗಿದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.
ಅತಿಥಿ ಉಪನ್ಯಾಸಕರ ನೇಮಕಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳು ನಡೆಸಿದ ವ್ಯಾಪಕ ಪ್ರತಿಭಟನೆಗಳಿಗೆ ಕೊನೆಗೂ ಮಣಿದ ರಾಜ್ಯ ಸರ್ಕಾರ ಇಂದು ನೇಮಕಾತಿಗೆ ಗ್ರೀನ್ ಸಿಗ್ನಲ್ ನೀಡಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ 2025-26ನೇ ಶೈಕ್ಷಣಿಕ ಸಾಲಿನ ಹಾಲಿ ಸೆಮಿಸ್ಟರ್ ಪೂರ್ಣಗೊಳ್ಳುವವರೆಗೆ 2024-25ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿದ ಅತಿಥಿ ಉಪನ್ಯಾಸಕರನ್ನೇ ಕಾರ್ಯಭಾರಕ್ಕೆ ಅನುಗುಣವಾಗಿ ಮುಂದುವರಿಸಲು ಅನುಮತಿ ನೀಡಲಾಗಿದೆ. ಈ ಸಂಬಂಧ ಸೆಪ್ಟೆಂಬರ್ 29ರಂದು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸಂಜಯ್ ಬಿ.ಎಸ್ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿದ್ದರು. ಮತ್ತೊಂದೆಡೆ ಸಿವಿಲ್ ಸೇವಾ ಹುದ್ದೆಗಳಿಗೆ ಮಾಡುವ ನೇರ ನೇಮಕಾತಿಗಳಲ್ಲಿ ಮೂರು ವರ್ಷ ವಯೋಮಿತಿ ಸಡಿಲಿಕೆ ಮಾಡಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಸೆಪ್ಟೆಂಬರ್ 6ರಂದು ರಾಜ್ಯ ಸರ್ಕಾರ ಸಿವಿಲ್ ಹುದ್ದೆಗಳ ನೇರ ನೇಮಕಾತಿಗಳಿಗೆ 2 ವರ್ಷ ಸಡಿಲಿಕೆ ಮಾಡಿ ಆದೇಶಿಸಿತ್ತು. ಇದೀಗ 3 ವರ್ಷಗಳ ಸಡಿಲಿಕೆ ಮಾಡಿದೆ.
ಹಾಸನದ ಆಲೂರು ತಾಲ್ಲೂಕಿನ ಮನೆಯೊಂದರಲ್ಲಿ ಸಂಭವಿಸಿದ ನಿಗೂಢ ಸ್ಫೋಟದಲ್ಲಿ ದಂಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಳೆದ ತಡರಾತ್ರಿ ಈ ಘಟನೆ ನಡೆದಿದ್ದು ಆರಂಭದಲ್ಲಿ ಇದು ಸಿಲಿಂಡರ್ ಸ್ಫೋಟವಾಗಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ಸ್ಫೋಟಕ್ಕೆ ನಿಖರವಾದ ಕಾರಣವನ್ನು ಪೊಲೀಸರು ಇನ್ನೂ ಖಚಿತಪಡಿಸಿಲ್ಲ. ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡ ದಂಪತಿ ಕಾವ್ಯ ಮತ್ತು ಸುದರ್ಶನ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲು ಪಾಲಾಗಿರುವ ನಟ ದರ್ಶನ್ ಅವರು ಜೈಲಿನಲ್ಲಿ ತಮಗೆ ಕನಿಷ್ಠ ಸೌಲಭ್ಯ ನಿರಾಕರಿಸಲಾಗಿದೆ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದು ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಅಕ್ಟೋಬರ್ 9ಕ್ಕೆ ತೀರ್ಪು ಕಾಯ್ದಿರಿಸಿದೆ. ವಿಚಾರಣೆ ವೇಳೆ ಜೈಲು ಅಧಿಕಾರಿಗಳು 57ನೇ ಸೆಷನ್ಸ್ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದು, ಎರಡು ಕಡೆಯ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಆದೇಶ ಕಾಯ್ದಿರಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ ನಟ ದರ್ಶನ್ ಅವರ ಪರ ವಕೀಲ ಸುನಿಲ್, ನಟನನ್ನು ಬೇರೆ ಸೆಲ್‌ಗೆ ಸ್ಥಳಾಂತರಿಸುವಂತೆ ಒತ್ತಾಯಿಸಿದರು. ಜೈಲು ಕೈಪಿಡಿಯಲ್ಲಿ ಕೇವಲ 14 ದಿನಗಳು ಎಂದು ಉಲ್ಲೇಖಿಸಿರುವಾಗ ತಮ್ಮ ಕಕ್ಷಿದಾರರನ್ನು 45 ದಿನಗಳವರೆಗೆ ಕ್ವಾರಂಟೈನ್ ಸೆಲ್‌ನಲ್ಲಿ ಏಕೆ ಇರಿಸಲಾಗಿದೆ ಎಂದು ಸುನೀಲ್ ಪ್ರಶ್ನಿಸಿದರು.
Advertisement