
ಭಟ್ಕಳ (ಉತ್ತರ ಕನ್ನಡ): ಭಟ್ಕಳದ ಮೀನು ಮಾರುಕಟ್ಟೆ ವಿವಾದಕ್ಕೆ ಧಾರ್ಮಿಕ ಬಣ್ಣ ಬಳಿಯುವ ಪ್ರಯತ್ನಗಳು ನಡೆಯುತ್ತಿದ್ದು, ಹಿಂದೂ ಮೀನುಗಾರ ಮಹಿಳೆಯರನ್ನು ಗುರಿಯಾಗಿಸಿ ಅಪಪ್ರಚಾರ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಹಿಂದೂ ಮೀನುಗಾರ ಮಹಿಳೆಯರ ವಿರುದ್ಧ ದ್ವೇಷ ಭಿತ್ತರಿಸುವ ಉದ್ದೇಶದಿಂದ ಮಕ್ಕಳಿಂದ ಒಂದು ಸ್ಕಿಟ್ ಮಾಡಿಸಿರುವ ಕಿಡಿಗೇಡಿಗಳು, ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.
1,000ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ನ್ಯೂ ಫಿಶ್ ಮಾರ್ಕೆಟ್ ಡೈಲಿ ಅಪ್‌ಡೇಟ್ ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ ಕೊಂಕಣಿ ಭಾಷೆಯ ಉಪಭಾಷೆಯಾದ ನವಯತಿಯಲ್ಲಿ ಈ ವಿಡಿಯೋ ಇದ್ದು, ವಿಡಿಯೋದಲ್ಲಿ “ಹಿಂದೂ ಮಹಿಳೆಯರು ನಮ್ಮನ್ನು ಲೂಟಿ ಮಾಡುತ್ತಿದ್ದಾರೆ. ಅವರು ನಮ್ಮನ್ನು ಹಲವು ಬಾರಿ ಲೂಟಿ ಮಾಡಿದ್ದಾರೆ. ನಮ್ಮ ಜನರಿಗೆ ಬುದ್ಧಿ ಇಲ್ಲ' ಎಂಬಂತಹ ಆರೋಪಗಳನ್ನು ಮಾಡಿ, ಮತೀಯ ವೈರತ್ವವನ್ನು ಹೆಚ್ಚಿಸಲು ಯತ್ನಿಸಲಾಗಿದೆ.
ಸೌದಿ ಅರೇಬಿಯಾ ಅಥವಾ ದುಬೈನಂತಹ ಗಲ್ಫ್ ದೇಶಗಳಲ್ಲಿ ಈ ಸ್ಕಿಟ್ ಮಾಡಿಸಿ, ಭಟ್ಕಳದಲ್ಲಿ ಧರ್ಮಗಳ ನಡುವೆ ದ್ವೇಷ ಮೂಡಿಸಲು ಯತ್ನ ನಡೆಸಲಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಭಟ್ಕಶ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಭಟ್ಕಳದ ಹಳೇ ಬಸ್ ನಿಲ್ದಾಣದ ಬಳಿಯ ಹಳೇ ಮೀನು ಮಾರುಕಟ್ಟೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಹಲವು ವರ್ಷಗಳಿಂದ ಒಟ್ಟಿಗೆ ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಆದರೆ, ಇತ್ತೀಚೆಗೆ ಪುರಸಭೆಯು ಸಂತೆ ಮಾರುಕಟ್ಟೆಯ ಬಳಿ ಹೊಸ ಮೀನು ಮಾರುಕಟ್ಟೆ ನಿರ್ಮಿಸಿ, ಹಳೇ ಮಾರುಕಟ್ಟೆಯನ್ನು ನೆಲಸಮ ಮಾಡಿ ಅಲ್ಲಿ ಕಾಂಪ್ಲೆಕ್ಸ್ ನಿರ್ಮಿಸಲು ಯೋಜಿಸಿತ್ತು.
ಪುರಸಭೆ ಅಧಿಕಾರಿಗಳು ಎಲ್ಲಾ ಮಾರಾಟಗಾರರಿಗೆ ಹೊಸ ಮಾರುಕಟ್ಟೆಗೆ ತೆರಳಲು ಸೂಚನೆ ನೀಡಿದರೂ, ಸ್ಥಳ ಮತ್ತು ವ್ಯವಸ್ಥೆಯ ಕೊರತೆಯಿಂದಾಗಿ ಹಲವು ಮೀನುಗಾರರು ಹಿಂಜರಿದರು. ಬದಲಿಗೆ, ಹಳೆಯ ಮಾರುಕಟ್ಟೆಯನ್ನೇ ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿದ್ದರು. ಈ ಬಗ್ಗೆ ಮೀನುಗಾರಿಕಾ ಸಚಿವ ಮಾಂಕಾಳು ವೈದ್ಯ ಅವರು, ಮಾರುಕಟ್ಟೆಯನ್ನು ಕೆಡವಲಾಗುವುದಿಲ್ಲ ಎಂದು ಭರವಸೆ ನೀಡಿದ್ದರು.
Advertisement