

ಚಿಕ್ಕಮಗಳೂರು: ಮಲೆನಾಡು ಜಿಲ್ಲೆ ಚಿಕ್ಕಮಗಳೂರಿನ ಬಿಳೆಕಲ್ಲು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಮೆರವಣಿಗೆ ಸಂಭ್ರಮದ ನಡುವೆ ನಿನ್ನೆ ಸಾಯಂಕಾಲ ವೇಗವಾಗಿ ಬಂದ ಕಾರೊಂದು ಮೆರವಣಿಗೆಯಲ್ಲಿದ್ದ ಜನರ ಮೇಲೆ ಹರಿದ ಪರಿಣಾಮ 7 ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿು ಒಂಬತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಬಿಳೆಕಲ್ಲು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಮೆರವಣಿಗೆ ನಡೆಯುತ್ತಿದ್ದಾಗ, ನಿಯಂತ್ರಣ ತಪ್ಪಿದ ಕಾರು ಏಕಾಏಕಿ ಜನರ ಗುಂಪಿಗೆ ನುಗ್ಗಿ ಪಲ್ಟಿಯಾಗಿದೆ. ಇಂದಾವರ ಗ್ರಾಮದಿಂದ ಬಿಳೆಕಲ್ಲು ಗ್ರಾಮದ ತನ್ನ ತಂಗಿ ಮನೆಗೆ ಹೋಗಿದ್ದ 7 ವರ್ಷದ ಬಾಲಕಿ ಸಾನ್ವಿ ಕಾರು ಗುದ್ದಿದ ರಭಸಕ್ಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಅಪಘಾತದಲ್ಲಿ ನಿಶ್ಚಿತ (11ವ), ತೃಪ್ತಿ (11ವ), ತಿಮ್ಮರಾಜು (45ವ), ಉಷಾ (22ವ), ಸೃಷ್ಟಿ (18ವ), ನಾಗರಾಜು (28ವ), ಚೇತನ್ (16ವ) ಸೇರಿದಂತೆ ಒಟ್ಟು 9 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಕಾರಿನಲ್ಲಿದ್ದ ಸುಧಾಕರ್ ಎಂಬುವವರಿಗೂ ಗಾಯಗಳಾಗಿದ್ದು, ಅವರ ಸ್ಥಿತಿಯೂ ಗಂಭೀರವಾಗಿದೆ.
ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
Advertisement