

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಮತ್ತು ಮಂಚೇನಹಳ್ಳಿ ತಾಲ್ಲೂಕು ವ್ಯಾಪ್ತಿಯ ದೇಗುಲಗಳಲ್ಲಿ ಜಾತಿ, ಧರ್ಮ, ಲಿಂಗದ ಕಾರಣಕ್ಕೆ ದೇಗುಲ ಪ್ರವೇಶಕ್ಕೆ ಅಡ್ಡಿಪಡಿಸಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಮಂಚೇನಹಳ್ಳಿ ಮತ್ತು ಚಿಕ್ಕಬಳ್ಳಾಪುರ ತಹಶೀಲ್ದಾರ್ ಆದೇಶಿಸಿದ್ದಾರೆ.
ಶಾಸಕ ಪ್ರದೀಪ್ ಈಶ್ವರ್ ಅವರ ಆದೇಶದ ಪ್ರಕಾರ ಈ ನಿರ್ದೇಶನ ನೀಡುತ್ತಿರುವುದಾಗಿ ಉಲ್ಲೇಖಿಸಿದ್ದಾರೆ. ಮುಜರಾಯಿ ಮತ್ತು ಖಾಸಗಿ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುವುದು ಭಕ್ತರ ಹಕ್ಕು. ದೇವರ ದೃಷ್ಟಿಯಲ್ಲಿ ಎಲ್ಲ ಭಕ್ತರು ಸಮಾನರು.
ಸಂವಿಧಾನದ ಪ್ರಕಾರ ಜಾತಿ, ಜನಾಂಗ, ಧರ್ಮ, ಲಿಂಗ, ಜನ್ಮಸ್ಥಳದ ಆಧಾರದಲ್ಲಿ ತಾರತಮ್ಯ ಮಾಡುವುದನ್ನು ನಿಷೇಧಿಸಲಾಗಿದೆ. ಮುಜರಾಯಿ ದೇಗುಲಗಳ ಜೊತೆಗೆ ಖಾಸಗಿ ದೇಗುಲಗಳಲ್ಲಿಯೂ ಪ್ರವೇಶ ನಿರಾಕರಿಸುವುದು ಕಾನೂನು ಬಾಹಿರ.
ಏಪ್ರಿಲ್ 13 ರಂದು ಜ್ಞಾಪಕ ಪತ್ರ ಹೊರಡಿಸಲಾಗಿದೆ. ಪೂಜಾ ಕೇಂದ್ರಗಳಲ್ಲಿ ದರ್ಶನ ಪಡೆಯುವುದು ಪ್ರತಿಯೊಬ್ಬ ಭಕ್ತನ ದೈವಿಕ ಹಕ್ಕು , ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಸಂವಿಧಾನದ 15 ನೇ ವಿಧಿಯನ್ನು ಉಲ್ಲೇಖಿಸಿ, ಜಾತಿ, ಧರ್ಮ, ಲಿಂಗ ಅಥವಾ ಜನ್ಮಸ್ಥಳವನ್ನು ಆಧರಿಸಿ ಪ್ರವೇಶ ನಿರಾಕರಣೆ ಕಾನೂನುಬಾಹಿರ ಮತ್ತು ಸಂವಿಧಾನಬಾಹಿರ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೆಲವು ಸಮುದಾಯಗಳಿಗೆ ದೇವಾಲಯಗಳಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಹಲವಾರು ದೂರುಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಅಂತಹ ಉಲ್ಲಂಘನೆಗಳನ್ನು ಪರಿಹರಿಸಲು ಮತ್ತು ಎಲ್ಲರನ್ನೂ ಒಳಗೊಂಡ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದೆ ಎಂದು ಆಡಳಿತವು ತಿಳಿಸಿದೆ.
ನಿರ್ದೇಶನವನ್ನು ಜಾರಿಗೊಳಿಸಲು, ಎಲ್ಲಾ ದೇವಾಲಯಗಳು ತಮ್ಮ ಪ್ರವೇಶದ್ವಾರಗಳಲ್ಲಿ "ಜಾತಿ, ಜನಾಂಗ, ಧರ್ಮ ಅಥವಾ ಲಿಂಗದ ಯಾವುದೇ ತಾರತಮ್ಯವಿಲ್ಲದೆ ದೇವರ ದರ್ಶನಕ್ಕಾಗಿ ಎಲ್ಲರಿಗೂ ಮುಕ್ತ ಪ್ರವೇಶ ಎಂದು ಹೇಳುವ ಫಲಕಗಳನ್ನು ತಕ್ಷಣವೇ ಹಾಕಲು ಸೂಚಿಸಲಾಗಿದೆ.
ದೇವಾಲಯ ಪ್ರವೇಶಕ್ಕೆ ಅಡ್ಡಿಪಡಿಸುವ ಯಾವುದೇ ವ್ಯಕ್ತಿ ಅಥವಾ ದೇವಾಲಯದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶ ಪತ್ರದಲ್ಲಿ ಎಚ್ಚರಿಸಲಾಗಿದೆ. ತಾಲ್ಲೂಕಿನಾದ್ಯಂತ ಪೂಜಾ ಸ್ಥಳಗಳಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವುದು ಮತ್ತು ಸಾಮಾಜಿಕ ಸಮಾನತೆ ಖಚಿತಪಡಿಸಿಕೊಳ್ಳುವುದು ಪ್ರಮುಖ ಗುರಿಯಾಗಿದೆ.
Advertisement