

ಬೆಂಗಳೂರು: ಕೊರೊನಾ ವೇಳೆ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಸಂತ್ರಸ್ತರ ಕುಟುಂಬಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. 5 ವರ್ಷಗಳ ಬಳಿಕ 21 ಮಂದಿಗೆ ಸರ್ಕಾರಿ ಕೆಲಸ ಘೋಷಣೆ ಮಾಡಲಾಗಿದ್ದು, ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇಮಕಾತಿ ಆದೇಶ ಪತ್ರ ವಿತರಿಸಲಿದ್ದಾರೆ.
ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕೊರೋನಾ ಸಮಯದಲ್ಲಿ ಸಂಭವಿಸಿದ ಆಕ್ಸಿಜನ್ ದುರಂತ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ವೇಳೆ 36 ಜನ ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದರು. ಅಂದು ಉಂಟಾದ ಆಘಾತ ಮತ್ತು ನೋವು ಇನ್ನೂ ಕುಟುಂಬಗಳನ್ನು ಕಾಡುತ್ತಿದ್ದು, ಜೀವನೋಪಾಯಕ್ಕಾಗಿ ಅವರು ಕಳೆದ ಐದು ವರ್ಷಗಳಿಂದ ಕಷ್ಟಗಳನ್ನು ಎದುರಿಸುತ್ತಿದ್ದರು.
ಸಂತ್ರಸ್ತರ ಜೀವನದ ಕಥೆ ಮನಕಲುವಂತಿದೆ. ಸೌಮ್ಯಾ ಅವರ ಪತಿ ದೊಡ್ಡಯ್ಯ ಅವರು ಆಕ್ಸಿಜನ್ ದುರಂತದಲ್ಲಿ ಸಾವನ್ನಪಪಿದ್ದರು. ಪತಿ ಸಾವಿನ ಬಳಿಕ ಕುಟುಂಬ ನಿರ್ವಹಣೆ ಸೌಮ್ಯಾ ಅವರಿಗೆ ಕಷ್ಟಕರವಾಗಿತ್ತು. ಸಣ್ಣ ಪುಟ್ಟ ಕೆಲಗಳನ್ನು ಮಾಡುತ್ತಾ ಮಕ್ಕಳನ್ನು ಶಾಲೆಗೆ ಕಳುಹಿಸಿ, ಜೀವನ ಮಾಡುತ್ತಿದ್ದಾರೆ.
ಇದೀಗ ಸರ್ಕಾರದಿಂದ ಉದ್ಯೋಗ ದೊರಕುತ್ತಿರುವುದಕ್ಕೆ ಸೌಮ್ಯಾ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ನನ್ನ ಮಗ ಶಶಾಂಕ್ ಎಂಜಿನಿಯರಿಂಗ್‌ನ ಅಂತಿಮ ವರ್ಷಕ್ಕೆ ಕಾಲಿಡುತ್ತಿದ್ದಾನೆ. ಅವನಿಗೆ ಸರ್ಕಾರಿ ಕೆಲಸ ಸಿಗುತ್ತಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.
ಬಹುತೇಕ ಅರ್ಹರಿಗೆ ಅವರ ವಿದ್ಯಾರ್ಹತೆ ಆಧಾರದಲ್ಲಿ ಗ್ರೂಪ್-ಡಿ ಹುದ್ದೆಗಳು ನೀಡಲಾಗುತ್ತಿದ್ದು, ಕೆಲವರಿಗೆ ಚಾಲಕರ ಹುದ್ದೆಗಳೂ ಲಭಿಸುತ್ತಿವೆ. ಇವರಲ್ಲಿ ಅನೇಕರಿಗೆ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (CIMS)ಯಲ್ಲಿ ಉದ್ಯೋಗ ದೊರೆಯಲಿದೆ ಎಂದು ತಿಳಿದುಬಂದಿದೆ.
ಈ ನಿರ್ಧಾರವು ಕೇವಲ ಉದ್ಯೋಗ ನೀಡುವ ಕ್ರಮವಷ್ಟೇ ಅಲ್ಲ, ಸರ್ಕಾರದ ಹೊಣೆಗಾರಿಕೆ ಮತ್ತು ಮಾನವೀಯತೆ ತೋರಿಸುವ ಹೆಜ್ಜೆಯಾಗಿ ಕಾಣಲಾಗುತ್ತಿದೆ. ದುರಂತದ ತನಿಖೆ ನಡೆಸಿದ ಸಮಿತಿ ವರದಿ ಹಾಗೂ ಸಚಿವ ಸಂಪುಟದ ಅನುಮೋದನೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಭಾರತ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ರಾಹುಲ್ ಗಾಂಧಿಯವರು ಸಂತ್ರಸ್ತ ಕುಟುಂಬಗಳನ್ನು ವೈಯಕ್ತಿಕವಾಗಿ ಭೇಟಿ ನೀಡಿ, ಸಾಂತ್ವನ ಹೇಳಿ, ಭರವಸೆ ನೀಡಿದ್ದರು. ಈ ಭರವಸೆ ಸಂತ್ರಸ್ತ ಕುಟುಂಬಗಳಿಗೆ ಆಶಾಕಿರಣವಾಗಿತ್ತು.
ಆದರೆ, ಸರ್ಕಾರ ಕ್ರಮ ಕೈಗೊಳ್ಳದಿರುವುದರ ಕುರಿತು ಅಸಮಾಧಾನಗೊಂಡಿದ್ದರು. ಇದೀಗ, ಸಂತ್ರಸ್ತರ ಕುಟುಂಬಸ್ಥರಿಗೆ ಸರ್ಕಾರಿ ನೌಕರಿ ಸಿಗುತ್ತಿದ್ದು, ಅಂತಿಮವಾಗಿ ಅವರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.
Advertisement