

ಬೆಂಗಳೂರು: ರೋಗಿಯೊಬ್ಬರಿಗೆ ಮರ್ಮಾಂಗ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಆತ ಪೂರ್ಣ ಗುಣವಾಗುವ ಮೊದಲೇ ಆತನನ್ನು ಡಿಸ್ಚಾರ್ಜ್ ಮಾಡಿದ್ದರ ಪರಿಣಾಮ ರೋಗಿ ಶಾ ನವಾಜ್ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರ್ಮಾಂಗಕ್ಕೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ರೋಗಿಯನ್ನ ಪೂರ್ಣ ಗುಣವಾಗುವ ಮೊದಲೇ ಮನೆಗೆ ಕಳುಹಿಸಿದ್ದರು. ಮನೆಗೆ ತೆರಳಿದ ಬಳಿಕ ಶಾ ನವಾಜ್ ಸಾವನ್ನಪ್ಪಿದ್ದು ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಶಾ ನವಾಜ್ (45) ಮರ್ಮಾಂಗದಲ್ಲಿ ಗಡ್ಡೆ ಬೆಳೆದ ಹಿನ್ನೆಲೆ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಾ ನವಾಜ್ ಖಾಸಗಿ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಮನೆಗೆ ಆಧಾರವಾಗಿದ್ದ ನವಾಜ್ ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.
ಮರ್ಮಾಂಗದಲ್ಲಿ ಗಡ್ಡೆ ಬೆಳೆದ ಕಳೆದ ಒಂದೂವರೆ ತಿಂಗಳ ಹಿಂದೆ ವಿಕ್ಟೋರಿಯಾ ಆಸ್ಪತ್ರೆಯ ಎಮರ್ಜೆನ್ಸಿ ವಿಭಾಗಕ್ಕೆ ಈತನನ್ನು ದಾಖಲಿಸಲಾಗಿತ್ತು. ಸೋಂಕು ತಗುಲಿದೆ ಎಂದು ಹೇಳಿದ್ದ ವೈದ್ಯರು ಮರ್ಮಾಂಗಕ್ಕೆ ಶಸ್ತ್ರಚಿಕಿತ್ಸೆ ನಡೆಸಿದ್ದರು.
ಕೆಲ ದಿನಗಳ ಬಳಿಕ ಪ್ಲಾಸ್ಟಿಕ್ ಸರ್ಜರಿ ವಿಭಾಗಕ್ಕೆ ಹೋಗುವಂತೆ ರೋಗಿಗೆ ಸೂಚಿಸಲಾಗಿತ್ತು. ಆದರೆ ಶಸ್ತ್ರ ಚಿಕಿತ್ಸೆಯ ಗಾಯ ಇನ್ನೂ ವಾಸಿಯಾಗಿಲ್ಲ. ಗಾಯ ವಾಸಿಯಾಗದೇ ಪ್ಲಾಸ್ಟಿಕ್ ಸರ್ಜರಿ ಮಾಡಲು ಸಾಧ್ಯವಿಲ್ಲ, ಗಾಯ ಪೂರ್ಣಗೊಂಡ ಬಳಿಕ ಬನ್ನಿ ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದ್ದರು. ಈ ಮಧ್ಯೆ ಆತನಿಗೆ ಮರ್ಮಾಂಗದಲ್ಲಿನ ಗಾಯದ ನೋವು ತೀವ್ರಗೊಂಡಿದೆ.
ಶಸ್ತ್ರಚಿಕಿತ್ಸೆ ಹಾಗೂ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಸಿಬ್ಬಂದಿ ಸಮನ್ವಯತೆ ಕೊರತೆ ಕಾರಣ ರೋಗಿ ಗಂಭೀರ ಸ್ಥಿತಿಯಲ್ಲಿ ಇರುವಾಗಲೇ ಡಿಸ್ಚಾರ್ಜ್ ಆಗುವಂತೆ ಒತ್ತಡ ಹೇರಲಾಗಿದೆ. ಮನೆಗೆ ತೆರಳಿದ್ದ ರೋಗಿಗೆ ಕೆಮ್ಮು ಬಂದಿದ್ದು ಹೊಲಿಗೆ ಬಿಚ್ಚಿ ಹೋದ ಕಾರಣ ರಕ್ತಸ್ರಾವವಾಗಿ ಆತ ಮೃತಪಟ್ಟಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಶಾ ನವಾಜ್ ಸಾವನ್ನಪ್ಪುವುದಕ್ಕೂ ಮೊದಲು ಆತನ ಪತ್ನಿ 3 ದಿನ ಆಸ್ಪತ್ರೆಯ ಬಳಿ ಇರುವ ಫುಟ್ ಪಾತ್ ನಲ್ಲೇ ರೋಗಿಯನ್ನು ಇಟ್ಟುಕೊಂಡಿದ್ದರು. ಎಷ್ಟೇ ಅಂಗಲಾಚಿದರೂ ಆಸ್ಪತ್ರೆ ಸಿಬ್ಬಂದಿ ಮತ್ತೆ ಆತನನ್ನು ದಾಖಲಿಸಿಕೊಂಡಿಲ್ಲ. ಆತನ ಪರಿಸ್ಥಿತಿ ವಿವರಿಸಿದರೂ ಇದ್ದರೂ ವೈದ್ಯರು ಚಿಕಿತ್ಸೆ ನೀಡದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ಪತ್ನಿ ಹಾಗೂ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
Advertisement