

ಬೆಂಗಳೂರು: ಕಬಡ್ಡಿ ಪಂದ್ಯದಲ್ಲಿ ಬೆಟ್ಟಿಂಗ್ ಆರೋಪದ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಲು ನ್ಯಾಯಾಲಯ ಆದೇಶಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ.ಪರಮೇಶ್ವರ್ ಅವರು ತಮ್ಮ ಹೇಳಿಕೆ ಸಂಬಂಧ ಬುಧವಾರ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ.
“ನಾನು ಹೇಳಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಕಬಡ್ಡಿ ಪಂದ್ಯಗಳ ವೇಳೆ ಸಾಮಾನ್ಯವಾಗಿ ಬಳಸುವ ರೀತಿಯ ಮಾತು. ಕಾನೂನು ದೃಷ್ಟಿಯಿಂದ ಅದು ತಪ್ಪಾಗಿರಬಹುದು, ಆದರೆ, ನಾನು ಯಾವ ರೀತಿ ಹೇಳಿದ್ದೇನೆ ಎನ್ನುವುದು ಮುಖ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ನಾನೇನಾದರೂ ಬೆಟ್ಟಿಂಗ್ ಪ್ರಮೋಟ್ ಮಾಡಿ ಎಂದು ಹೇಳಿದ್ದರೆ ಸರಿಯಲ್ಲ. ನಾನು ಒಬ್ಬ ಜವಾಬ್ದಾರಿ ಸ್ಥಾನದವನಾಗಿ, ಪ್ರಮೋಟ್ ಮಾಡ್ತೇನೆ ಎಂದರೆ ಶುದ್ದ ಸುಳ್ಳು. ಅರ್ಥೈಸಿಕೊಳ್ಳುವುದರ ಮೇಲೆ ಹೋಗುತ್ತದೆ ಎಂದು ಹೇಳಿದ್ದಾರೆ.
ಈಗ ತಮಾಷೆನೂ ಮಾಡುವಂತಿಲ್ಲ ಎಂಬಂತಾಗಿದೆ. ನಾನು ಕಾನೂನನ್ನು ಗೌರವಿಸುವವನು. ಕಾನೂನು ರಕ್ಷಣೆ ಮಾಡುವ ಖಾತೆ ನಿಭಾಯಿಸುತ್ತಿದ್ದೇನೆ. ನಾನು ಕಾನೂನಿಗೆ ಗೌರವ ಕೊಡಬೇಕಲ್ಲವೇ? ಕಾನೂನು ಏನು ಕ್ರಮ ತೆಗೆದುಕೊಳ್ಳುತ್ತದೆ, ಅದಕ್ಕೆ ಬಿಟ್ಟಿದ್ದೇನೆ ಎಂದರು.
ಕೋರ್ಟ್‌ನಿಂದ ನೋಟಿಸ್ ಕೊಟ್ಟಿರಲಿಲ್ಲ. ನೋಟಿಸ್ ಬಂದಿದ್ದರೆ ಅರ್ಥೈಸಲಾಗುತ್ತಿತ್ತು. ಗಂಭಿರವಾಗಿ ಪರಿಗಣಿಸಬೇಡಿ ಎಂದು ಮನವರಿಕೆ ಮಾಡಲಾಗುತ್ತಿತ್ತು. ನೋಟಿಸ್ ಬಂದಿಲ್ಲ. ಏಕಾಏಕಿಯಾಗಿ ಆದೇಶ ಮಾಡಿದ್ದಾರೆ. ಕಾನೂನಿಗೆ ಗೌರವ ಕೊಡಬೇಕು, ಗೌರವಿಸುತ್ತೇನೆ ಎಂದು ಹೇಳಿದರು.
Advertisement