

ಬೆಳಗಾವಿ: ಕುಂದಾನಗರಿ ಬೆಳಗಾವಿ ಮಧ್ಯರಾತ್ರಿಯಲ್ಲಿ ಗುಂಡಿನ ಸದ್ದು ಕೇಳಿ ಬೆಚ್ಚಿ ಬಿದ್ದಿದ್ದು, ನಗರದ ಮಂಡೋಳಿ ರಸ್ತೆಯಲ್ಲಿರುವ ವಕೀಲೆಯೊಬ್ಬರ ಮನೆ ಮೇಲೆ ಫೈರಿಂಗ್ ಮಾಡಿದ ಆತಂಕಕಾರಿ ಘಟನೆ ಶನಿವಾರ ರಾತ್ರಿ ನಡೆದಿದೆ.
ನಿನ್ನೆ ರಾತ್ರಿ 1 ರಿಂದ 2 ಗಂಟೆ ಸುಮಾರಿಗೆ ವಕೀಲೆ ಪೂಜಾ ಕಾಕತಕರ್ ಅವರ ಮನೆಯ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಮನೆಯ ಮೊದಲ ಮಹಡಿಯನ್ನು ಗುರಿಯಾಗಿಸಿ ಈ ದಾಳಿ ಮಾಡಲಾಗಿದೆ.
ಮನೆಯ ಮೊದಲ ಮಹಡಿಯಲ್ಲಿ ವಕೀಲೆ ಪೂಜಾ ಕಾಕತಕರ್ ಅವರ ಪುತ್ರಿ ಓದುತ್ತಿದ್ದಳು. ಈ ವೇಳೆ ದಾಳಿ ನಡೆದಿದೆ. ಮನೆಯ ಗ್ಲಾಸ್ ಮೇಲೆ ಫೈರಿಂಗ್ ಮಾರ್ಕ್ ಬಿದ್ದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಸುಕೋ ಟೀಂ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಬೆಳಗಾವಿ ಜಿಲ್ಲೆಯಲ್ಲಿ ಪ್ರಭಾವಿ ವಕೀಲೆಯಾಗಿರುವ ಪೂಜಾ ಕಾಕತಕರ್ ಅವರು ಕಳೆದ 18 ವರ್ಷಗಳಿಂದ ವಕೀಲೆ ವೃತ್ತಿ ಮಾಡುತ್ತಾ ಬಂದಿದ್ದು, ಹೈ ಪ್ರೊಫೈಲ್ ಕೇಸ್ಗಳ ಪರ ವಾದ ಮಾಡುತ್ತಿದ್ದರು. ಆದ್ರೆ, ನಿನ್ನೆ ರಾತ್ರಿ ದುಷ್ಕರ್ಮಿಗಳಿಂದ ಅವರ ಮನೆ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಘಟನೆ ನಂತರ ಪೂಜಾ ಕಾಕತಕರ್ ಅವರ ಕುಟುಂಬಕ್ಕೆ ರಕ್ಷಣೆ ನೀಡುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ. ಎಫ್‌ಎಸ್‌ಎಲ್ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
ಈ ಸಂಬಂಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement