

ಬೆಂಗಳೂರು: ಹಿಂದಿನ ವರ್ಷಗಳಿಗಿಂತ ಈ ವರ್ಷದ ಏಪ್ರಿಲ್‌ನಲ್ಲಿ ರಾಜ್ಯದಲ್ಲಿ ವಿದ್ಯುತ್ ಬಳಕೆ ಗಣನೀಯವಾಗಿ ಹೆಚ್ಚಾಗಿದೆ.
ಏಪ್ರಿಲ್ 1ರಿಂದ 26ರವರೆಗೆ ಕರ್ನಾಟಕದಲ್ಲಿ 9,101 ಮಿಲಿಯನ್ ಯುನಿಟ್‌ಗಳ (MU) ವಿದ್ಯುತ್ ಬಳಕೆ ದಾಖಲಾಗಿದ್ದು, ಇದು ಕಳೆದ ಐದು ವರ್ಷಗಳಲ್ಲಿ ಅತಿ ಹೆಚ್ಚು ಹಾಗೂ 2025ರ ಇದೇ ಅವಧಿಗಿಂತ ಸುಮಾರು 20% ಹೆಚ್ಚು. ಕಳೆದ ಕೆಲವು ವರ್ಷಗಳಲ್ಲಿ ಈ ಅವಧಿಯ ಬಳಕೆ 7,500ರಿಂದ 8,000 MUಗಳ ನಡುವೆ ಇತ್ತು.
ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳ ಪ್ರಕಾರ, ವಿಪರೀತ ಬಿಸಿಲು, ಬಿಸಿಲ ದಾಹ ವಿದ್ಯುತ್ ಬಳಕೆಯ ಏರಿಕೆಗೆ ಪ್ರಮುಖ ಕಾರಣವಾಗಿದೆ. ಈ ವರ್ಷ ತೀವ್ರವಾದ ಬಿಸಿಲು ಕಂಡುಬಂದಿದ್ದು, ಜನರು ಏರ್ ಕಂಡೀಷನ್, ಫ್ಯಾನ್ ಗಳ ಮೊರೆ ಹೋಗುವುದು ಹೆಚ್ಚಾಗುತ್ತಿದೆ. ಇದರಿಂದ ವಿದ್ಯುತ್ ಬಳಕೆ ಹೆಚ್ಚಾಗಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ತಿಳಿಸಿದ್ದಾರೆ.
ಪೂರ್ವ ಮುಂಗಾರು ಮಳೆಯ ಕೊರತೆಯಿಂದ ಉಷ್ಣಾಂಶ ನಿರಂತರವಾಗಿ ಹೆಚ್ಚಾಗಿದ್ದು, ಜನರು ಏರ್ ಕಂಡಿಷನರ್‌ಗಳು (AC) ಮತ್ತು ಕೂಲರ್‌ಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಇದರಿಂದ ಬೇಡಿಕೆ ಹೆಚ್ಚಾಗಿದೆ.
ಇನ್ನೊಂದೆಡೆ, ಪಶ್ಚಿಮ ಏಷ್ಯಾದ ಸಂಘರ್ಷದಿಂದ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಕಾರಣವೂ ವಿದ್ಯುತ್ ಬಳಕೆಗೆ ಪರಿಣಾಮ ಬೀರಿರಬಹುದು ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಏಪ್ರಿಲ್ ಮೊದಲ ಎರಡು ವಾರಗಳಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ಹಲವಾರು ದೊಡ್ಡ ಹೋಟೆಲ್‌ಗಳು ಇಂಡಕ್ಷನ್ ಸ್ಟೌವ್‌ಗಳನ್ನು ಬಳಸಲು ಆರಂಭಿಸಿದವು. ಇದರಿಂದ ವಿದ್ಯುತ್ ಬಳಕೆ ಹೆಚ್ಚಾಗಿರಬಹುದು ಎಂದು ಅಧಿಕಾರಿಯೊಬ್ಬರು ಹೇಳಿದರು.
ಅನಿಲ ಸಿಲಿಂಡರ್‌ಗಳು ಸುಲಭವಾಗಿ ಲಭ್ಯವಾಗುವುದಿಲ್ಲ ಎಂಬ ಭೀತಿಯಿಂದ ಅನೇಕ ಮನೆಗಳು ಇನ್‌ಡಕ್ಷನ್ ಸ್ಟೌವ್‌ಗಳನ್ನು ಬಳಸಲು ಆರಂಭಿಸಿದ್ದು, ಗೃಹ ಬಳಕೆ ವಿದ್ಯುತ್ ಹೆಚ್ಚಾಗಿದೆ. ಹಲವಾರು ವಾಣಿಜ್ಯ ಸಂಸ್ಥೆಗಳು ಅಡುಗೆಗಾಗಿ ಇಂಡಕ್ಷನ್ ಉಪಕರಣಗಳಿಗೆ ಬದಲಾಯಿಸಿರುವುದರಿಂದ ಲೋಡ್ ಸಾಮರ್ಥ್ಯ ಹೆಚ್ಚಿಸಲು ಅರ್ಜಿಗಳನ್ನು ಸಲ್ಲಿಸುತ್ತಿರುವುದಾಗಿ ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಇಂತಹ ಉಪಕರಣಗಳ ಬಳಕೆ ಇನ್ನೂ ಕಡಿಮೆ ಮಟ್ಟದಲ್ಲೇ ಇದೆ ಎಂದು ಗೌರವ್ ಗುಪ್ತಾ ಹೇಳಿದರು.
ವಿದ್ಯುತ್ ಬೇಡಿಕೆ ಇನ್ನಷ್ಟು ಹೆಚ್ಚಾದರೂ ನಿರ್ವಹಿಸಲು ಇಲಾಖೆ ಸಿದ್ಧವಾಗಿದೆ. ಪೂರ್ವ ಮಾನ್ಸೂನ್ ಮಳೆಯು ಮುಂದಿನ ಕೆಲವು ದಿನಗಳಲ್ಲಿ ಬೇಡಿಕೆಯನ್ನು ಕಡಿಮೆ ಮಾಡುತ್ತದೆ ಎಂಬ ನಿರೀಕ್ಷೆಯಿದೆ. ಆದರೂ ಪರಿಸ್ಥಿತಿ ಹದಗೆಟ್ಟರೂ ನಾವು ಸಿದ್ಧರಾಗಿದ್ದೇವೆ ಎಂದು ಹೇಳಿದರು.
2023-24ರಲ್ಲಿ 16,110 ಮೆಗಾವಾಟ್ ಇದ್ದದ್ದು, 2024-25ರಲ್ಲಿ 16,985 ಮೆಗಾವಾಟ್ ಮತ್ತು 2025-26ರಲ್ಲಿ 17,330 ಮೆಗಾವಾಟ್ ಆಗಿತ್ತು. ಈ ವರ್ಷ ಅದು 18,478 ಮೆಗಾವಾಟ್‌ಗೆ ಏರಿಕೆಯಾಗಿದೆ.
Advertisement