ಬಲವಾದ ಗಾಳಿ, ಮಳೆ ಇಲ್ಲ: ಕೈಕೊಟ್ಟ ಮುಂಗಾರು; ಆಗಸ್ಟ್ ತಿಂಗಳಲ್ಲಿ ಮಳೆ ಬರುತ್ತಾ?

ಜೂನ್ ಮತ್ತು ಜುಲೈ ತಿಂಗಳಲ್ಲಿ ನೈಋತ್ಯ ಮುಂಗಾರು ರಾಜ್ಯದಲ್ಲಿ ಶೇ.28ರಷ್ಟು ಮಳೆ ಕೊರತೆಯನ್ನು ದಾಖಲಿಸಿದೆ. ಉತ್ತರ ಒಳನಾಡು ಕರ್ನಾಟಕದಲ್ಲಿ ಶೇ.10, ಕರಾವಳಿ ಕರ್ನಾಟಕದಲ್ಲಿ ಶೇ.28 ಹಾಗೂ ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಶೇ.36ರಷ್ಟು ಮಳೆ ಕೊರತೆಯಾಗಿದೆ.
In June and July, the Southwest monsoon showed a deficit of 28 per cent -- north interior Karnataka recorded 10 per cent deficit
ಜೂನ್, ಜುಲೈ ತಿಂಗಳಲ್ಲಿ ನೈಋತ್ಯ ಮುಂಗಾರು ರಾಜ್ಯದಲ್ಲಿ ಶೇ.28ರಷ್ಟು ಮಳೆ ಕೊರತೆಯನ್ನು ದಾಖಲಿಸಿದೆ. ಉತ್ತರ ಒಳನಾಡು ಕರ್ನಾಟಕದಲ್ಲಿ ಶೇ.10ರಷ್ಟು ಮಳೆ ಕೊರತೆ ದಾಖಲಾಗಿದೆ.
Updated on

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಕರ್ನಾಟಕದಾದ್ಯಂತ ಬೀಸುತ್ತಿರುವ ಬಲವಾದ ಗಾಳಿ ತಂಪಾದ, ಆಹ್ಲಾದಕರ ವಾತಾವರಣವನ್ನು ತಂದಿದ್ದರೂ, ಮುಂಗಾರು ಮಳೆಯನ್ನು ಹೆಚ್ಚಿಸಲು ನೆರವಾಗಿಲ್ಲ.

ಭಾರತೀಯ ಹವಾಮಾನ ಇಲಾಖೆ (IMD) ಮಾಹಿತಿ ಪ್ರಕಾರ, ರಾಜ್ಯದ ಬಹುತೇಕ ಭಾಗಗಳಲ್ಲಿ ಗಂಟೆಗೆ ಸರಾಸರಿ 50-60 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ. ಆದರೆ ಈ ಗಾಳಿಯಲ್ಲಿ ತೇವಾಂಶದ ಪ್ರಮಾಣ ಅತ್ಯಂತ ಕಡಿಮೆಯಾಗಿದೆ. ಉತ್ತರ ಒಳನಾಡು ಕರ್ನಾಟಕದಲ್ಲಿ ಗಾಳಿಯ ವೇಗ 50-60 ಕಿ.ಮೀ., ದಕ್ಷಿಣ ಒಳನಾಡು ಕರ್ನಾಟಕದಲ್ಲಿ 40-50 ಕಿ.ಮೀ. ಹಾಗೂ ಕರಾವಳಿ ಕರ್ನಾಟಕದಲ್ಲಿ ಸುಮಾರು 40 ಕಿ.ಮೀ. ವೇಗದಲ್ಲಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಮುಂದಿನ ಏಳು ದಿನಗಳ ಕಾಲ ಮಳೆಯ ಮುನ್ಸೂಚನೆ ಇಲ್ಲ.

ಜೂನ್ ಮತ್ತು ಜುಲೈ ತಿಂಗಳಲ್ಲಿ ನೈಋತ್ಯ ಮುಂಗಾರು ರಾಜ್ಯದಲ್ಲಿ ಶೇ.28ರಷ್ಟು ಮಳೆ ಕೊರತೆಯನ್ನು ದಾಖಲಿಸಿದೆ. ಉತ್ತರ ಒಳನಾಡು ಕರ್ನಾಟಕದಲ್ಲಿ ಶೇ.10, ಕರಾವಳಿ ಕರ್ನಾಟಕದಲ್ಲಿ ಶೇ.28 ಹಾಗೂ ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಶೇ.36ರಷ್ಟು ಮಳೆ ಕೊರತೆಯಾಗಿದೆ.

ಕರ್ನಾಟಕ ಹವಾಮಾನ ಇಲಾಖೆಯ ನಿರ್ದೇಶಕ ಎನ್. ಪುವಿಯರಸನ್, ಮಳೆ ಸುರಿಯಲು ಅಗತ್ಯವಾದ ಟ್ರಫ್ (ಕಡಿಮೆ ಒತ್ತಡದ ಉದ್ದ ವಲಯ), ಗಾಳಿಯ ಸಂಗಮ (Convergence) ಅಥವಾ ಇತರ ಅನುಕೂಲಕರ ಸಿನಾಪ್ಟಿಕ್ (ವಿಶಾಲ ಪ್ರಮಾಣದ ವಾತಾವರಣೀಯ) ಪರಿಸ್ಥಿತಿಗಳು ಇಲ್ಲ. ಸಾಮಾನ್ಯವಾಗಿ ಬಯಲು ಪ್ರದೇಶಗಳಲ್ಲಿ ಮಳೆಯಾಗಲು ಗಾಳಿಯಲ್ಲಿ 55-60 ಮಿ.ಮೀ. ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಸುಮಾರು 50 ಮಿ.ಮೀ. ನೀರಿನ ಸಮನಾದ ತೇವಾಂಶ ಇರಬೇಕು. ಆದರೆ ಕರ್ನಾಟಕದಲ್ಲಿ ಈಗ ಅದು 40 ಮಿ.ಮೀ.ಗಿಂತಲೂ ಕಡಿಮೆಯಿದೆ ಎಂದು ವಿವರಿಸಿದರು.

ಪ್ರಸ್ತುತ ವಾತಾವರಣ ಆಹ್ಲಾದಕರವಾಗಿದ್ದರೂ, ಈ ಋತುವಿನಲ್ಲಿ ಈಗಾಗಲೇ ದುರ್ಬಲವಾಗಿರುವ ಮುಂಗಾರನ್ನು ಚೇತರಿಸಿಕೊಳ್ಳಲು ಇದು ಸಹಕಾರಿಯಾಗುತ್ತಿಲ್ಲ. ಎಲ್ ನಿನೊ ಪರಿಣಾಮದಿಂದಾಗಿ ಈ ವರ್ಷ ಮುಂಗಾರು ದುರ್ಬಲವಾಗಲಿದೆ ಎಂಬ ಮುನ್ಸೂಚನೆಯನ್ನು ಈಗಿನ ಪರಿಸ್ಥಿತಿ ಸಮರ್ಥಿಸುತ್ತಿದೆ ಎಂದು ಪುವಿಯರಸನ್ ಹೇಳಿದರು.

ಕರಾವಳಿ ಕರ್ನಾಟಕದಲ್ಲಿ ಮಾತ್ರ ಕಡಲಾಚೆಯ ಟ್ರಫ್ (offshore truff) ಪರಿಣಾಮದಿಂದ ಮಳೆಯಾಗುತ್ತಿದೆ. ಆದರೆ ರಾಜ್ಯದ ಬಹುತೇಕ ಭಾಗಗಳಲ್ಲಿ ಮುಂದಿನ ಏಳು ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದೇ ವೇಳೆ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ಪ್ರಕಾರ, ಜುಲೈ 31ರ ವೇಳೆಗೆ ರಾಜ್ಯದ 14 ಜಲಾಶಯಗಳಲ್ಲಿ ಒಟ್ಟು 473.55 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದು 722.49 ಟಿಎಂಸಿ ಅಡಿ ಇತ್ತು.

ಹಾರಂಗಿ, ಹೇಮಾವತಿ, ಕೆಆರ್‌ಎಸ್ ಮತ್ತು ಕಬಿನಿ ಒಳಗೊಂಡಿರುವ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ಪ್ರಸ್ತುತ 66.98 ಟಿಎಂಸಿ ಅಡಿ ನೀರು ಸಂಗ್ರಹವಿದ್ದು, ಕಳೆದ ವರ್ಷ ಇದೇ ಸಮಯದಲ್ಲಿ 106.41 ಟಿಎಂಸಿ ಅಡಿ ನೀರಿತ್ತು.

ಭದ್ರಾ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ಆಲಮಟ್ಟಿ ಮತ್ತು ನಾರಾಯಣಪುರ ಅಣೆಕಟ್ಟುಗಳನ್ನು ಒಳಗೊಂಡಿರುವ ಕೃಷ್ಣಾ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ಪ್ರಸ್ತುತ 269.59 ಟಿಎಂಸಿ ಅಡಿ ನೀರು ಸಂಗ್ರಹವಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಅದು 347.04 ಟಿಎಂಸಿ ಅಡಿ ಆಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com