

ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಯಡಕುಮರಿ ಬಳಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದ ಪರಿಣಾಮ ಬೆಂಗಳೂರು-ಮಂಗಳೂರು ಮಾರ್ಗದ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಘಟನಾ ಸ್ಥಳಕ್ಕೆ ಆಗಮಿಸಿರುವ ರೈಲ್ವೆ ಇಲಾಖೆ ಸಿಬ್ಬಂದಿ ಗುಡ್ಡ ತೆರವು ಕಾಮಗಾರಿಯನ್ನು ಭರದಿಂದ ನಡೆಸುತ್ತಿದ್ದಾರೆ. ಆದರೆ, ಸಂಚಾರ ರದ್ದತಿಯಿಂದಾಗಿ ಪ್ರಯಾಣಿಕರು ತೀವ್ರ ಪರದಾಟ ನಡೆಸುವಂತಾಗಿದೆ.
ಬೆಂಗಳೂರು-ಮುರಡೇಶ್ವರ, ಬೆಂಗಳೂರು-ಕೋಜಿಕೋಡ್, ವಿಜಯಪುರ-ಮಂಗಳೂರು ರೈಲುಗಳು ಹಾಸನದಲ್ಲಿ ನಿಲುಗಡೆ. ಬೆಂಗಳೂರು-ಕಾರವಾರ ಎಕ್ಸ್ಪ್ರೆಸ್ ರೈಲು ಸಕಲೇಶಪುರದಲ್ಲಿ ನಿಲುಗಡೆ.ಮುರಡೇಶ್ವರ-ಬೆಂಗಳೂರು, ಮಂಗಳೂರು-ವಿಜಯಪುರ ರೈಲುಗಳು ಸುಬ್ರಹ್ಮಣ್ಯದಲ್ಲಿ ನಿಲುಗಡೆ.
ಕೋಜಿಕೋಡ್ ಬೆಂಗಳೂರು ರೈಲು ಪುತ್ತೂರಿನಲ್ಲಿ ನಿಲುಗಡೆ. ಪ್ರಯಾಣಿಕರಿಗೆ ರೈಲು ರದ್ದತಿ ಬಗ್ಗೆ ಇಲಾಖೆಯಿಂದ ಮಾಹಿತಿ ನೀಡಲಾಗಿದೆ.
ರೈಲು ಸಂಚಾರ ರದ್ದತಿಯ ಕುರಿತು ಇಲಾಖೆಯು ಪ್ರಯಾಣಿಕರಿಗೆ ಮಾಹಿತಿ ನೀಡಿದ್ದು, ನಿನ್ನೆ ರಾತ್ರಿಯಿಂದಲೇ ಕಾಯುತ್ತಿದ್ದ ಹಲವು ಪ್ರಯಾಣಿಕರು ನಡುರಾತ್ರಿಯಲ್ಲಿ ಪರ್ಯಾಯವಾಗಿ ಬಸ್ ಮತ್ತು ಕಾರುಗಳ ವ್ಯವಸ್ಥೆ ಮಾಡಿಕೊಂಡು ಪ್ರಯಾಣ ಬೆಳೆಸಿದ್ದಾರೆ. ಇನ್ನು ಸುರಕ್ಷತೆಯ ದೃಷ್ಟಿಯಿಂದ ಇಂದು ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.
ರೈಲಿನಲ್ಲಿ ಕಾನ್ಸ್ಟೇಬಲ್ ಪರೀಕ್ಷೆಗೆ ತೆರಳುತ್ತಿದ್ದ ಪರೀಕ್ಷಾರ್ಥಿಗಳು ಪರದಾಡುತ್ತಿದ್ದಾರೆ. ಅಲ್ಲದೇ ನಡುರಾತ್ರಿ ಪ್ರಯಾಣಕ್ಕೆ ಪರ್ಯಾಯ ಮಾರ್ಗ ಹುಡುಕಲು ಪ್ರಯಾಣಿಕರು ಪರದಾಡಿದ್ದಾರೆ.
ಸಂಪೂರ್ಣವಾಗಿ ರದ್ದಾದ ರೈಲುಗಳಲ್ಲಿ ಆಗಸ್ಟ್ 2 ರಂದು ಮಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್ - ಯಶವಂತಪುರ ಸಾಪ್ತಾಹಿಕ ಎಕ್ಸ್ಪ್ರೆಸ್ ಮತ್ತು ಅದೇ ದಿನ ಯಶವಂತಪುರದಿಂದ ಹೊರಡುವ ರೈಲು ಸಂಖ್ಯೆ 16575 ಯಶವಂತಪುರ - ಮಂಗಳೂರು ಗೋಮಟೇಶ್ವರ ತ್ರೈಮಾಸಿಕ ಎಕ್ಸ್ಪ್ರೆಸ್ ಸೇರಿವೆ.
ನೈಋತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿ ಭೂಕುಸಿತ ಸಂಭವಿಸಿದ ಕಾರಣ ಈ ಬದಲಾವಣೆಗಳು ಅಗತ್ಯವಾಗಿವೆ ಎಂದು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗ ತಿಳಿಸಿದೆ. ಹಾನಿಗೊಳಗಾದ ಹಳಿಯನ್ನು ರೈಲು ಕಾರ್ಯಾಚರಣೆಗೆ ಸುರಕ್ಷಿತವೆಂದು ಘೋಷಿಸುವವರೆಗೆ ಪುನಃಸ್ಥಾಪನೆ ಕಾರ್ಯ ಮುಂದುವರಿಯುವ ನಿರೀಕ್ಷೆಯಿದೆ. ಪ್ರಯಾಣಿಸುವ ಮೊದಲು ರೈಲು ವೇಳಾಪಟ್ಟಿಯನ್ನು ಪರಿಶೀಲಿಸುವಂತೆ ರೈಲ್ವೆ ಅಧಿಕಾರಿಗಳು ಪ್ರಯಾಣಿಕರನ್ನು ಒತ್ತಾಯಿಸಿದ್ದಾರೆ.